ಚಾಮರಾಜನಗರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ನ.19 ರಂದು ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.
ನಗರದ ವಾಲ್ಮೀಕಿ ಭವನದಲ್ಲಿ ನಡೆಯಲಿರುವ ಸಭೆಯನ್ನು ಸಮಿತಿಯ ರಾಜ್ಯಾಧ್ಯಕ್ಷ ಮಾವಳ್ಳಿಶಂಕರ್ ಉದ್ಘಾಟಿಸುವರು. ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಕೆ.ಸಿದ್ದರಾಜು ಅಧ್ಯಕ್ಷತೆ ವಹಿಸುವರು. ರಾಜ್ಯ ಸಮಿತಿ ಸದಸ್ಯರಾದ ಇಂದಿರಾಕೃಷ್ಣಪ್ಪ ಪುಷ್ಪಾರ್ಚನೆ ಮಾಡುವರು. ಉಡುಪಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗುಕಲ್ಕುಂದ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಜಿ.ಗುರುರಾಜ್ ಯರಗನಹಳ್ಳಿ ದಲಿತ ಸಾಹಿತ್ಯ ಮತ್ತು ದಲಿತ ಚಳವಳಿ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ರಮೇಶ್, ಈರೇಶ್ ಈರೇಹಳ್ಳಿ, ಮಾನ್ವರ್, ಕಾರಳ್ಳಿ ಶ್ರೀನಿವಾಸ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕರಾದ ನಿರ್ಮಲ, ಸುಮ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಘದ ಪದಾಧಿಕಾರಿಗಳು ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಕೆ.ವೀರ, ಹಿಂಡಯ್ಯ, ನಾಗಣ್ಣ, ಮಹೇಶ್, ಮಾದೇಶ್, ಮುರುಗೇಶ್, ಚಿಕ್ಕದೊಡ್ಡಯ್ಯ, ಆರ್.ರಾಚಪ್ಪ, ಈರತಯ್ಯ ಹಾಜರಿದ್ದರು.