

ಮೈಸೂರು: ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ, ಕದಂಬ ರಂಗ ವೇದಿಕೆ ಸಹಯೋಗದಲ್ಲಿ ನ.15 ರಂದು ನಗರದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ‘ನೀಲಾಂಬಿಕೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಕರ್ತರ ಭವನದಲ್ಲಿ ಶನಿವಾರ ನಾಟಕದ ಭಿತ್ತಿಪತ್ರ ಅನಾವರಣಗೊಳಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ಮಾತನಾಡಿ, ಬಸವಾದಿ ಶರಣರ ತತ್ವ, ಆದರ್ಶ ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ನೀಲಾಂಬಿಕೆ ನಾಟಕ ಬಸವಣ್ಣನವರ ಆದರ್ಶವನ್ನು ಪ್ರಸಾರ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ನಟ ಶಂಕರ್ ಅಶ್ವತ್ಥ್ ಮಾತನಾಡಿ, ದೂರದಿಂದಲೇ ರಂಗಭೂಮಿ ನೋಡಿ ಬೆಳೆದ ನನಗೆ ರಂಗಭೂಮಿಯಲ್ಲಿನ ಶಿಸ್ತು ತುಂಬ ಇಷ್ಟ. ಇಲ್ಲಿ ಕಲಿತವರು ಅಡಿಪಾಯದಂತೆ ಮುಂದೆ ಬೆಳೆಯುತ್ತಾರೆ. ಕಲಾವಿದರಿಗೆ ಸರಿಯಾದ ಅಡಿಪಾಯ ಎಂದರೆ ಅದುವೇ ರಂಗಭೂಮಿ ಎಂದು ಹೇಳಿದರು.
ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಮಾರ್ಗದರ್ಶನದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಏಕಕಾಲಕ್ಕೆ ಬಸವಾದಿ ಶರಣರ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ನವೆಂಬರ್ 15ರಂದು ಎಲ್ಲೆಡೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಮೈಸೂರಿನಲ್ಲಿ ನನ್ನ ನಿರ್ದೇಶನದಲ್ಲಿ ‘ನೀಲಾಂಬಿಕೆ’ ನಾಟಕ ಪ್ರದರ್ಶನಗೊಳ್ಳುತ್ತಿದೆ. ಅಂದು ಸಂಜೆ 7ಕ್ಕೆ ನಾಟಕ ಆರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
ವೇದಿಕೆ ಉಪಾಧ್ಯಕ್ಷ ಯು.ಎಸ್. ರಾಮಣ್ಣ, ಖಜಾಂಚಿ ಡಿ. ತಿಪ್ಪಣ್ಣ, ಕಾರ್ಯದರ್ಶಿ ಸುಬ್ಬನರಸಿಂಹ, ಸದಸ್ಯರಾದ ನಾಗೇಂದ್ರಕುಮಾರ್, ಅಶ್ವತ್ಥ್ ಕದಂಬ, ಮೂರ್ತಿ ಬೇಲೂರು ಇದ್ದರು.