ನ.14 ರಿಂದ 20ರವರೆಗೆ ಸಹಕಾರ ಸಪ್ತಾಹ ಕಾರ್ಯಕ್ರಮ

Published on

ಚಾಮರಾಜನಗರ: ಜಿಲ್ಲೆಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನ. 14 ರಿಂದ 20 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ತಿಳಿಸಿದರು.

ತಾಲೂಕಿನ ಕುದೇರಿನಲ್ಲಿರುವ ಚಾಮುಲ್ ಸಭಾಂಗಣದಲ್ಲಿ ನ. 14 ರಂದು ಸಪ್ತಾಹಕ್ಕೆ ಚಾಮುಲ್ ಅಧ್ಯಕ್ಷ ನಾಗೇಂದ್ರ ಚಾಲನೆ ನೀಡುವರು. ಇದೇ ವೇಳೆ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದರ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ಹನೂರಿನ ಚಾಮುಲ್ ಉಪ ಕಚೇರಿಯಲ್ಲಿ ನ.15 ರಂದು ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತದ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಳ್ಳೇಗಾಲದ ತಿಮ್ಮರಾಜೀಪುರದಲ್ಲಿ ನ.16 ರಂದು ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ, ಯಳಂದೂರಿನ ಗೌಡಹಳ್ಳಿಯಲ್ಲಿ ನ.17 ರಂದು ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ, ನಗರದ ಲ್ಯಾಂಪ್ಸ್ ಸಭಾಂಗಣದಲ್ಲಿ ನ.18 ರಂದು ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು, ಗುಂಡ್ಲುಪೇಟೆ ಹಾಲಹಳ್ಳಿಯಲ್ಲಿ ನ.19 ರಂದು ಮಹಿಳೆಯರು, ಯುವಕರು ಮತ್ತು ಅಬಲವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು ವಿಚಾರ ಹಾಗೂ ನ20 ರಂದು ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಯೂನಿಯನ್ ನಿರ್ದೇಶಕ ಸುಂದರಪ್ಪ, ಬಸವಣ್ಣ, ನಾಗರಾಜು, ಸಿಇಒ ಮನುಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net