

ಮೈಸೂರು: ಪ್ರಸಕ್ತ ಸಾಲಿನ ಕೊನೆಯ ರಾಷ್ಟ್ರೀಯ ಲೋಕ ಅದಾಲತ್ ನವೆಂಬರ್ 12ರಂದು ನಡೆಯಲಿದ್ದು, ಜಿಲ್ಲೆಯಲ್ಲಿರುವ 64 ನ್ಯಾಯಾಲಯದಲ್ಲೂ ಬಾಕಿ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ಜರುಗಲಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಕೇಸ್‌ಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸುವ ಉದ್ದೇಶದಿಂದ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,12, 443 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈ ಪೈಕಿ 59,555 ಸಿವಿಲ್, 52,888 ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ 38,752 ಇತ್ಯರ್ಥವಾಗುವ ಸಂಭವವಿದೆ. ಅದರಲ್ಲೂ 15,852 ಕೇಸ್‌ಗಳನ್ನು ರಾಜಿಯಾಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
3,954 ಮೋಟಾರು ವಾಹನ ಅಪಘಾತ ಪ್ರಕರಣಗಳು, 2,533 ರಾಜಿಯಾಗಬಹುದಾದ ಕ್ರಿಮಿನಲ್ ಕೇಸ್‌ಗಳು, 22,649 ಚೆಕ್ ಬೌನ್ಸ್ ಕೇಸ್‌ಗಳಲ್ಲಿ 4418 ಪ್ರಕರಣಗಳು, 742 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ 11,647 ಪ್ರಕರಣಗಳು ರಾಜಿ ಸಂಧಾನ ಆಗುವ ನಿರೀಕ್ಷೆ ಇದೆ ಎಂದರು.
ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ಕೋರ್ಟ್ ಆಗಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲೂಕು ಕಾನೂನು ಸೇವೆ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಬಾಕಿ ಪ್ರಕರಣ, ಖಾತೆ, ಕಂದಾಯ ಪ್ರಕರಣಗಳನ್ನೂ ಈ ಬಾರಿ ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
2022ನೇ ಸಾಲಿನ ಮಾರ್ಚ್‌ನಲ್ಲಿ ನಡೆದ ಅದಾಲತ್‌ನಲ್ಲಿ 54,893, ಜುಲೈನಲ್ಲಿ 75,562 ಮತ್ತು ಆಗಸ್ಟ್‌ನಲ್ಲಿ 57,548 ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಅಡಿಯಲ್ಲಿ ಕಳೆದ ಅದಾಲತ್‌ನಲ್ಲಿ 2 ಕೋಟಿ ರೂ.ದಂಡವನ್ನು ಸರ್ಕಾರಕ್ಕೆ ವಸೂಲಿ ಮಾಡಿ ಕೊಡಲಾಗಿದೆ. 4 ಸಾವಿರ ಮೋಟಾರು ವಾಹನಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಆಸ್ತಿ ಪಾಲು ಪ್ರಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇತ್ಯರ್ಥ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಾಕಿ ಉಳಿದಿರುವ ಭೂಪರಿಹಾರ ಪ್ರಕರಣಗಳ ರಾಜಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕೆ ಸಂಬಂಧ ಪರಿಹಾರ ಮೊತ್ತವನ್ನು ಸಂಬಂಧಪಟ್ಟವರಿಗೆ ನೀಡಲು ಸಿದ್ಧವಾಗಿದೆ. ಅಂತೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ 260 ಭೂಪರಿಹಾರ ಬಾಕಿ ಪ್ರಕರಣಗಳಿವೆ. 200 ಕೋಟಿ ರೂ.ಭೂ ಪರಿಹಾರದಲ್ಲಿ 120 ಕೋಟಿ ರೂ.ಪಾವತಿ ಮಾಡಿದ್ದು, ಇನ್ನೂ 70 ಕೋಟಿ ರೂ.ಮೊತ್ತವನ್ನು ಭೂಮಾಲೀಕರಿಗೆ ನೀಡುವ ಬಾಕಿ ಉಳಿದಿದೆ. ಈ ಕುರಿತು ಮುಡಾ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಉಳಿಕೆ ಪರಿಹಾರ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹಾದೇವಸ್ವಾಮಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ರಾಜಿ ಸಂಧಾನ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಹೊಸ ಪ್ರಕರಣಕ್ಕಿಂತ ಹಳೇ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು ನೀಡಲಾಗಿದೆ. ಹೆಚ್ಚು ಪ್ರಕರಣಗಳನ್ನು ಬಗೆಹರಿಸುವ ಮೂಲಕ ನ್ಯಾಯಾಲಯದ ಮೇಲಿನ ಒತ್ತಡ ಮತ್ತು ಹೊರೆ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ, ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ಇದ್ದರು.
ಪ್ರಯೋಜನ ಏನು?
*ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿದ ಪ್ರಕರಣದಲ್ಲಿ ಆದ ಆದೇಶಕ್ಕೆ ಇರುವಷ್ಟೇ ಮಹತ್ವ ಇಲ್ಲಿಯೂ ಇರಲಿದೆ
*ವ್ಯಾಜ್ಯವನ್ನು ಕಡಿಮೆ ಖರ್ಚು, ಶೀಘ್ರದಲ್ಲೇ ಇತ್ಯರ್ಥಪಡಿಸಿಕೊಳ್ಳಬಹುದು
ಸಮಯ ಉಳಿತಾಯದೊಂದಿಗೆ ಕಕ್ಷಿದಾರರ ನಡುವಿನ ಸಂಬಂಧ ಚೆನ್ನಾಗಿ ಉಳಿಯುತ್ತದೆ
*ಯಾವುದೇ ಕೋರ್ಟ್ ಶುಲ್ಕ ಕೊಡಬೇಕಾಗಿಲ್ಲ
*ಪಕ್ಷಗಾರರು ನೇರವಾಗಿ ಭಾಗವಹಿಸಬಹುದು
*ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು
*ಸಿವಿಲ್ ಕೇಸ್‌ಗಳು ಇತ್ಯರ್ಥಗೊಂಡರೆ ಅವಾರ್ಡ್ ಮಾಡಲಾಗುವುದು. ಅದು ಸಾಮಾನ್ಯ ಡಿಕ್ರಿಯಷ್ಟೇ ಮಹತ್ವ ಪಡೆದುಕೊಂಡಿರುತ್ತದೆ.
*ರಾಜಿಯಾದಲ್ಲಿ ಶೇ.100ರಷ್ಟು ನ್ಯಾಯಾಲಯ ಶುಲ್ಕ ವಾಪಸ್
ಲೋಕ್ ಅದಾಲತ್ ಅವಾರ್ಡ್ ವಿರುದ್ಧ ಮೇಲ್ಮನವಿಗೆ ಅವಕಾಶ ಇಲ್ಲ