ನ.1 ರಂದು ಪಂಚರತ್ನ ಯಾತ್ರೆ ಪ್ರವೇಶ

ನ.1 ರಂದು ಪಂಚರತ್ನ ಯಾತ್ರೆ ಪ್ರವೇಶ
Published on

ಹಾಸನ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನವಂಬರ್ ಒಂದರಿಂದ ಆರಂಭವಾಗಲಿರುವ ಜೆಡಿಎಸ್ ಪಂಚರತ್ನ ಯಾತ್ರೆ ನ.22 ಹಾಸನ ಜಿಲ್ಲೆ ಪ್ರವೇಶಿಸಲಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 122 ಕಿ.ಮೀ. ಸಂಚರಿಸಲಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ತಿಳಿಸಿದರು.
ಯಾತ್ರೆಯು ಜಿಲ್ಲೆಯಲ್ಲಿ ಅರಕಲಗೂಡಿನಿಂದ ಆರಂಭವಾಗಿ, ಸಕಲೇಶಪುರ, ಬೇಲೂರು, ಹಾಸನ ಮೂಲಕ ಅರಸೀಕೆರೆ ತಲುಪಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಅಂತಿಮವಾಗಿದೆಯೇ ಎಂಬ ಪ್ರಶ್ನೆಗೆ, ಮೈಸೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ತರಬೇತಿ ಶಿಬಿರದಲ್ಲಿ ಜೆಡಿಎಸ್ ಶಾಸಕರು, ವಿವಿಧ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು ಭಾಗವಹಿಸಿದ್ದರು. ಹಾಸನ ಕ್ಷೇತ್ರದಿಂದ ತಾವೊಬ್ಬರೇ ಭಾಗವಹಿಸಿದ್ದು, ಮುಂದೆ ಎಲ್ಲ ಒಳ್ಳೆಯದಾಗುತ್ತದೆ ಎಂಬುದಾಗಿ ತೇಲಿಕೆ ಉತ್ತರ ನೀಡಿದರು.


‘ಮೊದಲ ಹಂತದಲ್ಲಿ 126 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಣ್ಣ ಹೇಳಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿ ಕುರಿತು ಚರ್ಚೆ ಆಗಿಲ್ಲ. ಕ್ಷೇತ್ರದಲ್ಲಿ ವಿವಿಧ ಸಮಾವೇಶ ನಡೆಸುವ ಕುರಿತು ಚರ್ಚಿಸಲಾಗಿದೆ. ನಾನು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಸಾಲಗಾಮೆ ಹೋಬಳಿಯಲ್ಲಿ ನಮ್ಮ ತಂದೆ ಹಾಗೂ ಚಿಕ್ಕಪ್ಪ ಅವರ ಜೊತೆ ಇದ್ದ ಎಲ್ಲಾ ಹಿರಿಯ ಮುಖಂಡರ ಸಲಹೆ ಸೂಚನೆ ಪಡೆದು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಚಿಕ್ಕಪ್ಪ ದೇವು ಅವರ ಅವಧಿಯಲ್ಲಿ ಅರ್ಧಕ್ಕೆ ನಿಂತಿದ್ದ ದೇವಾಲಯಗಳನ್ನು ಪೂರ್ಣ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಬಿಜೆಪಿಗೆ ಅಭ್ಯರ್ಥಿ ಸಿಗಲಿಲ್ಲವೇ?
ನಗರಸಭೆ 16ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನವೀನ್ ನಾಗರಾಜ್ ಅವಿರೋಧ ಆಯ್ಕೆಗೆ ಸಹರಿಸಿದ ಕಾಂಗ್ರೆಸ್ ಮುಖಂಡರು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.


16ನೇ ವಾರ್ಡ್ ಉಪ ಚುನಾವಣೆಯಲ್ಲಿ ದಿವಂಗತ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕುಟುಂಬದ ಸದಸ್ಯರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸದೆ ಸ್ವತಂತ್ರವಾಗಿ ಕಣಕ್ಕಿಳಿದರೆ ಬೆಂಬಲ ನೀಡುವುದಾಗಿ ಶಾಸಕ ಪ್ರೀತಂಗೌಡ ಹೇಳಿದ್ದರು. ಆದರೆ ನಾವು ಜೆಡಿಎಸ್ ಪಕ್ಷದಿಂದಲೇ ಪ್ರಶಾಂತ್ ನಾಗರಾಜ್ ಅವರ ಸಹೋದರ ನವೀನ್ ಅವರನ್ನು ಕಣಕ್ಕಿಳಿಸಿದೆವು. ಶಾಸಕರು ತಮ್ಮ ಮಾತಿಗೆ ಬದ್ಧರಾಗಿದ್ದರೆ ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಕಿತ್ತು. ಆದರೆ ಅವರಿಗೆ ಅಭ್ಯರ್ಥಿ ಸಿಗಲಿಲ್ಲ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು.


ಸುದ್ದಿಗೋಷ್ಠಿಯಲ್ಲಿ ನಗರಸಭೆ 16ನೇ ವಾರ್ಡ್ ನೂತನ ಸದಸ್ಯ ನವೀನ್ ನಾಗರಾಜ್, ಮಾಜಿ ಸದಸ್ಯ ಇರ್ಷಾದ್ ಪಾಷಾ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net