ಧ್ವನಿ ಇಲ್ಲದವರಿಗೆ ದನಿಯಾಗಿ

07_01
Published on

ಡಿಸಿ ಶುಭಕಲ್ಯಾಣ್​ ಸಲಹೆ, ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ತುಮಕೂರು: ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 24್ಡ7 ಕಾಯೊರ್ನ್ಮುಖರಾಗಿರುವ ಪೊಲೀಸರು, ಮಾನಸಿಕ, ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸಲಹೆ ನೀಡಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ಆಯೋಜಿಸಿರುವ ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರು ವರ್ಷಕ್ಕೊಮ್ಮೆ 3 ದಿನದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ. ತಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಮಯ ಸಿಕ್ಕಾಗ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದರು.

ಸಾರ್ವಜನಿಕರಿಗೆ ಸರ್ಕಾರ ಎಂದಾಕ್ಷಣ ನೆನಪಾಗುವುದೇ ಪೊಲೀಸ್​ ಇಲಾಖೆ. ನ್ಯಾಯ ಅರಸಿ ಪೊಲೀಸರ ಬಳಿಗೆ ಬರುವ ಜನರು ನಿಮ್ಮನ್ನು ದೇವರಂತೆ ಕಾಣುತ್ತಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯವಿದೆ. ಇದನ್ನು ಅರ್ಥೈಸಿಕೊಂಡು ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಸಮಸ್ಯೆ ಹೊತ್ತು ಠಾಣೆಗಳಿಗೆ ಬರುವ ಪ್ರತಿಯೊಬ್ಬ ನಾಗರಿಕರ ಬಗ್ಗೆ ಕಾಳಜಿ, ಆಸಕ್ತಿಯಿಂದ ಸ್ಪಂದಿಸುವ ಮೂಲಕಕಾರ್ಯನಿರ್ವಹಿಸಬೇಕು. ಆಗ ಮಾತ್ರ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಲಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಪೊಲೀಸರು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಇದ್ದಾರೆ. ನಾವು ಪೊಲೀಸರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂದಾಗ ಕಾನೂನು ಸುವ್ಯವಸ್ಥೆ ವಿಚಾರ, ಯಾವುದೊ ಒಂದು ಒತ್ತಡ ಇದ್ದೇ ಇರುತ್ತದೆ. ಇವತ್ತು ಎಲ್ಲರನ್ನು ಶಾಂತಿಯುತ ವಾಗಿರುವುದನ್ನು ನೋಡುತ್ತಿರುವುದು ವಿಶೇಷವೆನಿಸಿದೆ. ಕ್ರೀಡೆ ಒತ್ತಡ ನಿವಾರಣೆಗೆ ಪೂರಕವೆನಿಸಿದೆ ಎಂದು ಶುಭಕಲ್ಯಾಣ್​ ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಉಪವಿಭಾಗದ ಪೊಲೀಸ್​ ಸಿಬ್ಬಂದಿ ಈ ಕೂಟದಲ್ಲಿ ಭಾಗವಹಿಸುತ್ತಿದ್ದು, ಕ್ರೀಡಾಸ್ಫೂರ್ತಿಯನ್ನು ಮೆರೆಯಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉಪವಿಭಾಗದ ಪೊಲೀಸ್​ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಳೆದ ವರ್ಷದ ಕ್ರೀಡಾಕೂಟದ ಚಾಂಪಿಯನ್​ ಡಿಎಆರ್​ನ ಉಮೇಶ್​ ಬೆಂಕಿ ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಹಸ್ತಾಂತರಿಸಿದರು. ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ವಿ.ಮರಿಯಪ್ಪ, ಅಬ್ದುಲ್​ ಖಾದರ್​, 12ನೇ ಬೆಟಾಲಿಯನ್​ ಕಮಾಂಡೆಂಟ್​ ಹಂಜಾ ಹುಸೇನ್​, ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ್​ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್​ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ದೇಶ, ರಾಜ್ಯದಲ್ಲಿನ ನಾಗರಿಕರನ್ನು ರಕ್ಷಣೆ ಮಾಡುವ ಪೊಲೀಸರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಇಂತಹ ಕ್ರೀಡಾಕೂಟ ಆಯೋಜಿಸುವುದು ಬಹುಮುಖ್ಯ. ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸರು ನಿರುಮ್ಮಳರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದನ್ನು ಹಾಗೂ ಎಲ್ಲರೂ ಒಂದೆಡೆ ಸೇರಿರುವುದು ನೋಡುವುದೇ ಒಂದು ಖುಷಿ.

| ಶುಭಕಲ್ಯಾಣ್​, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net