

ಕೋಲಾರ: ನಗರದ ಎಪಿಎಂಸಿ ನೌಕರ ಮುನಿರಾಜು ಸಹೋದರ ರಾಜ್ಕುಮಾರ್, ಸುಕನ್ಯಾ ದಂಪತಿ ಪುತ್ರಿ ಮೋನಿಷಾ ಪ್ರಿಯಾ ಶನಿವಾರ ರಾತ್ರಿ ಉಕ್ರೇನ್ನಿಂದ ವಾಪಸಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಯಭಾರ ಕಚೇರಿ ನೆರವಿಗೆ ಧನ್ಯವಾದ ಸಲ್ಲಿಸಿದರು.
ಬಂಕರ್ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ತಂಗಿದ್ದ ನಾವು ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಯಿತು. ನಾವಿದ್ದ ಹಾಸ್ಟೆಲ್ಗೂ ಭಾರತದ ಧ್ವಜ ಕಟ್ಟಿದ್ದು, ಧ್ವಜ ಹಿಡಿದೇ ಗಡಿ ತಲುಪಿದ್ದು ನಮಗೆ ನೆರವಾಯಿತು ಎಂದರು.
ಉಕ್ರೇನ್ನೊಳಗೆ ನಮ್ಮ ದೇಶದ ವಿಮಾನಗಳು ಬರುವ ಹಾಗಿರಲಿಲ್ಲ. ವಿಮಾನ ನಿಲ್ದಾಣಗಳು ಧ್ವಂಸಗೊಂಡಿದ್ದವು. ಕಷ್ಟಪಟ್ಟು ಗಡಿ ತಲುಪುವಂತೆ ನಮ್ಮ ರಾಯಭಾರ ಕಚೇರಿ ನಿರ್ದೇಶನ ನೀಡಿತ್ತು. ರೈಲುಗಳಲ್ಲಿ ಬರುವಾಗಲೂ ಅಲ್ಲಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದುದರಿಂದ ದೇವರನ್ನು ನೆನೆಯುತ್ತಾ ಗಡಿ ತಲುಪಿದೆವು ಎಂದರು.