

ಮೈಸೂರು: ಆರ್.ಧ್ರುವನಾರಾಯಣ ಅವರಲ್ಲಿ ಸಮುದಾಯ ಮತ್ತು ರಾಜಕೀಯ ನಿಷ್ಠೆ ತಾತ್ವಿಕವಾಗಿ ಅಂತರ್ಗತವಾಗಿತ್ತು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ರುವನಾರಾಯಣ ಅವರ ನಿಧನದಿಂದ ರಾಜಕೀಯ ಶೂನ್ಯ ಆವರಿಸಿದೆ. ಅವರ ನಿರ್ಗಮನ ದಿಗ್ಭ್ರಾಂತಿ ಮೂಡಿಸಿದೆ. ಸ್ವಾರ್ಥಕ್ಕಾಗಿ ಬದುಕದೆ ಪರರಿಗಾಗಿ ಕೆಲಸ ಮಾಡಿದವರು. ಅವರ ಪ್ರತಿ ಮಾತಿನಲ್ಲಿ ಸಜ್ಜನಿಕೆ ವ್ಯಕ್ತವಾಗುತ್ತಿತ್ತು. ಮಾತು ಮೃದು, ನಿಲುವು ಕಠೋರವಾಗಿತ್ತು. ಹುಟ್ಟಿಬಂದ ಮೂಲ, ಚರಿತ್ರೆ ಅರ್ಥ ಮಾಡಿಕೊಂಡಿದ್ದರು. ಬಹುತ್ವದ ಸಮಾಜಕ್ಕೆ ಅನುಕೂಲವಾಗುವ ಕಡೆ ಇದ್ದರು ಎಂದರು.
ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್ ಮಾತನಾಡಿ, ಮೈಸೂರು, ಮಂಗಳೂರು ಚುನಾವಣಾ ಉಸ್ತುವಾರಿ ವಹಿಸಿಕೊಂಡ ಬಳಿಕ ಧ್ರುವನಾರಾಯಣ ಅವರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಪಕ್ಷದವರೂ ಗೌರವಿಸುತ್ತಿದ್ದರು. ಜೆಂಟಲ್‌ಮ್ಯಾನ್ ಆಗಿದ್ದ ಅವರು ರಾಜಕಾರಣಕ್ಕೆ ಮಾದರಿಯಾಗಿದ್ದರು ಎಂದರು.
ತಳಮಟ್ಟದಿಂದ ಬೆಳೆದ ನಾಯಕರಾಗಿದ್ದರು. ಬಿಎಸ್ಸಿ (ಕೃಷಿ) ಪದವಿ ಮುಗಿದ ಬಳಿಕ ರಾಜಕಾರಣಕ್ಕೆ ಬಂದಾಗ ಪಾಲಕರ ಬೆಂಬಲವೂ ಇರಲಿಲ್ಲ. ಸರ್ಕಾರಿ ಕೆಲಸ ಗಿಟ್ಟಿಸಿದರೂ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಕೇಳಿಸಿಕೊಳ್ಳುವ ಗುಣವಿತ್ತು. ಯಾರೊಂದಿಗೂ ಕೋಪ ಮಾಡಿಕೊಳ್ಳದ ಅವರು ಅಂಬೇಡ್ಕರ್ ವಾದಿ ಎಂದು ತಿಳಿಸಿದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿತ್ತು. ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಇತ್ತು. ಅವರ ಅಗಲಿಕೆಯಿಂದ ಅನಾಥಭಾವ ಕಾಡುತ್ತಿದೆ. ಒತ್ತಡ ಇತ್ತು, ಹಾಗಂತ ಒತ್ತಡ ನಿಭಾಯಿಸಲಾಗದ ದುರ್ಬಲರಾಗಿರಲಿಲ್ಲ. ಕಾಂಗ್ರೆಸ್ ಎಂದೂ ಅವರೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಟಿಕೆಟ್ ಸಿಗುವ ಸಾಧ್ಯತೆಯೂ ಇತ್ತು. ಆದರೆ, ಸಾವಲ್ಲೂ ರಾಜಕೀಯ ಪ್ರಯತ್ನ ಮಾಡುತ್ತಿರುವುದು ನಿಲ್ಲಬೇಕು ಎಂದರು.
ಧ್ರುವನಾರಾಯಣ ಅವರು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಸಿದ್ದರಾಮಯ್ಯ ಅವರು ಕಾರ್ಯಕ್ರಮಗಳಲ್ಲಿ ಧ್ರುವ ಇದ್ದಾನಾ ಎಂದು ಮೊದಲು ಕೇಳುತ್ತಿದ್ದರು. ಮೈಸೂರು, ಚಾಮರಾಜನಗರ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದ್ದರೆ ಮೊದಲು ಧ್ರುವನಾರಾಯಣ ಅವರಿಗೆ ಕರೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಶರಣರ ಬದುಕನ್ನು ಮರಣದಲ್ಲಿ ಕಾಣು ಎಂಬ ಮಾತಿದೆ. ಇದಕ್ಕೆ ಧ್ರುವನಾರಾಯಣ ಉದಾಹರಣೆಯಾದರು. ಬದ್ಧತೆ ರಾಜಕಾರಣಿಯಾಗಿ, ಕಳಂಕ ರಹಿತವಾಗಿ ಅತ್ಯಂತ ಸರಳವಾಗಿ ಎಳ್ಳಷ್ಟೂ ಆಡಂಬರ ಇಲ್ಲದೆ ಬದುಕಿದ್ದು ನಮಗೆಲ್ಲ ಮಾದರಿ ಎಂದರು. ಶಾಸಕರು, ಪಕ್ಷದ ಮುಖಂಡರು ಧ್ರುವನಾರಾಯಣ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಕವಿ ಕುವೆಂಪು ಅವರ ವಿಶ್ವಮಾನವ ಗೀತೆಯನ್ನು ಹಾಡಿದರು.
ಎಂಎಲ್ಸಿ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ವಾಸು, ಸಂದೇಶ್ ನಾಗರಾಜ್, ಡಿ.ರವಿಂಶಕರ್, ಎ.ಆರ್.ಕೃಷ್ಣಮೂರ್ತಿ, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಮೇಯರ್ ಪುರುಷೋತ್ತಮ್, ಅಯೂಬ್ ಖಾನ್ ಮುಂತಾದವರು ಭಾಗವಹಿಸಿದ್ದರು.