

ಹನೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ದಿ. ಆರ್.ಧ್ರುವನಾರಾಯಣ ಆಸೆಯನ್ನು ಈಡೇರಿಸಬೇಕಾದರೆ ಹಾಗೂ ಅವರ ಕುಟುಂಬದ ಋಣ ತೀರಿಸಬೇಕಾದರೆ ಹೈಕಮಾಂಡ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಶಾಸಕ ಆರ್. ನರೇಂದ್ರ ಒತ್ತಾಯಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಧ್ರುವನಾರಾಯಣ ಅವರು ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ರಾಜಕೀಯ ವಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಚಾ.ನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಅದರಲ್ಲೂ ಹನೂರು ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿವನ್ನು ವಹಿಸಿದ್ದರು. ಈ ದಿಸೆಯಲ್ಲಿ ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದರು ಎಂದರು.
ಇವರ ಅಧಿಕಾರಾವಧಿಯಲ್ಲಿನ ಉತ್ತಮ ಸೇವೆ, ಜತೆಗೆ ಪಕ್ಷದ ಸಂಘಟನೆಗೆ ನೀಡಿದ ಕೊಡುಗೆಯನ್ನು ಮನಗಂಡು ಹೈಕಮಾಂಡ್ ಇವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ ನಮ್ಮನ್ನೆಲ್ಲ ಅಗಲಿರುವುದು ತುಂಬಾ ನೋವಿನ ಸಂಗತಿ ಎಂದರು.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಬೇಕು ಹಾಗೂ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಧ್ರುವನಾರಾಯಣ ಅವರ ಆಶಯವಾಗಿತ್ತು. ಈ ದಿಸೆಯಲ್ಲಿ ಕಾರ್ಯಕರ್ತರಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಾಯ ಕೇಳಿ ಬಂದಿದೆ. ಹಾಗಾಗಿ ಹೈಕಮಾಂಡ್ ಟಿಕೆಟ್ ನೀಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಪಪಂ ಉಪಾಧ್ಯಕ್ಷ ಗಿರೀಶ್, ಮಾಜಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಸೋಮಶೇಖರ್, ಸಂಪತ್‌ಕುಮಾರ್, ಹರೀಶ್‌ಕುಮಾರ್, ರಾಮಾಪುರ ಬ್ಲಾಕ್ ಅಧ್ಯಕ್ಷ ಈಶ್ವರ್, ಮಹಿಳಾಧ್ಯಕ್ಷೆ ಅತಿಯಾಬೇಗಂ, ಗ್ರಾಪಂ ಅಧ್ಯಕ್ಷರಾದ ಶಾಂತಿ, ಸುಧಾ, ಉಪಾಧ್ಯಕ್ಷ ರಾಮಲಿಂಗಂ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ನರೇಂದ್ರ ಪುತ್ರ ನವನೀತ್‌ಗೌಡ, ಮುಖಂಡರಾದ ಕೊಪ್ಪಾಳಿ ಮಹದೇವನಾಯ್ಕ, ಪುಟ್ಟರಾಜು, ಶಿವಕುಮಾರ್, ನಾಗರಾಜು, ಮಣಿ ಇತರರಿದ್ದರು.