ಧ್ಯಾನದಿಂದ ಇಡೀ ದಿನ ಲವಲವಿಕೆಯಿಂದಿರಲು ಸಾಧ್ಯ

Published on

ಚಿಕ್ಕಮಗಳೂರು: ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಧ್ಯಾನ ಮಾಡುವುದರಿಂದ ಇಡೀ ದಿನ ಲವಲವಿಕೆಯಿಂದ ಇರಲು ಸಾಧ್ಯ ಎಂದು ಮಡಿಕೇರಿಯ ಕೌಟುಂಬಿಕ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ತಿಳಿಸಿದರು.

ತಾಲೂಕಿನ ಆಣೂರು ಬಳಿಯ ಕಲ್ಲು ಗುಡ್ಡೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಸ್ನೇಹಿತರೊಡನೆ ಧ್ಯಾನದ ಬಗ್ಗೆ ಉಪನ್ಯಾಸ ನೀಡಿ, ಯಾವ ರೀತಿ ಧ್ಯಾನ ಮಾಡಬೇಕು ಎಂಬುದರ ಬಗ್ಗೆ ಕೆಲವರಿಗೆ ಅನುಮಾನವಿದೆ. ತುಂಬಾ ಸರಳವಾಗಿ ಧ್ಯಾನ ಮಾಡಲು ಶುರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಶಾಂತ ಸ್ಥಳದಲ್ಲಿ ಕುಳಿತು ಎರಡು ಕಣ್ಣುಗಳನ್ನ ಮುಚ್ಚಿ ಮೂಗಿನ ಮುಖಾಂತರ ಉಸಿರನ್ನು ನಿಧಾನವಾಗಿ ತೆಗೆದುಕೊಂಡು ಅಷ್ಟೇ ನಿಧಾನವಾಗಿ ಉಸಿರನ್ನು ಹೊರಬಿಡುತ್ತ ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಸಂಪೂರ್ಣ ಮನಸ್ಸು ಉಸಿರಿನ ಮೇಲೆ ಅವಲಂಬಿತವಾಗಿರಬೇಕು. ಉಸಿರು ತೆಗೆದುಕೊಳ್ಳುವ ಕ್ರಿಯೆ ಮತ್ತು ಉಸಿರು ಬಿಡುವ ಕ್ರಿಯೆಯ ಧ್ಯಾನದಲ್ಲಿ ತೊಡಗಿಸಿಕೊಂಡರೆ ಹೊರಗಡೆ ಪ್ರಪಂಚದ ಯೋಚನೆಗಳು ಮನಸ್ಸಿಗೆ ಬರುವುದಿಲ್ಲ. ಈ ರೀತಿ ಮಾಡುವುದರಿಂದ ನಮ್ಮ ಶರೀರದಲ್ಲಿ ಅದೆಷ್ಟೋ ರೋಗಗಳಿಗೆ ಔಷಧದ ಅವಶ್ಯಕತೆ ಇರುವುದಿಲ್ಲ. ಬದಲಿಗೆ ತನ್ನಷ್ಟಕ್ಕೆ ತಾನೇ ರೋಗಗಳು ಗುಣವಾಗಲಿದೆ ಎಂದರು.

ಧ್ಯಾನದಿಂದ ಅಪಾರವಾದ ಶುದ್ಧವಾದ ನಿದ್ದೆ ಮತ್ತು ಶಕ್ತಿ ಸಿಗುತ್ತದೆ. ಇದರಿಂದ ಆತ್ಮ, ಮನಸ್ಸು ಮತ್ತು ಶರೀರ ಅತಿ ಶೀಘ್ರವಾಗಿ ಪ್ರಶಾಂತ ಸ್ಥಿತಿಯಲ್ಲಿರುತ್ತದೆ. ಆಲೋಚನಾ ರಹಿತ ಸ್ಥಿತಿಯನ್ನು ಅತಿ ಶೀಘ್ರವಾಗಿ ಪಡೆಯಬಹುದಾಗಿದೆ. ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಿ ದೇಹ ವಜ್ರಕಾಯವಾಗುತ್ತದೆ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಜಯಶೀಲರಾಗುತ್ತೇವೆ. ಪ್ರತಿನಿತ್ಯ ನಮ್ಮ ನಡೆನುಡಿಯಲ್ಲಿ ಸೌಮ್ಯತೆ ಇರುತ್ತದೆ ನಮ್ಮ ಆಲೋಚನೆಗೆ ಮೀರುವಂತ ಮೂರನೇ ಕಣ್ಣಿನ ಅನುಭವವನ್ನು ಪಡೆಯುತ್ತೇವೆ. ಎಲ್ಲರೊಂದಿಗೆ ಪ್ರೇಮತ್ವದಿಂದ ಇರುತ್ತೇವೆ. ಮುಖ್ಯವಾಗಿ ನಮ್ಮ ಪಂಚೇAದ್ರಿಯಗಳು ಚುರುಕುಗೊಳ್ಳುತ್ತವೆ ಎಂದರು.

ಕಾಫಿ ಬೆಳೆಗಾರ ಎಂ.ಕೆ.ರುದ್ರೇಶ್ ಮಾತನಾಡಿ, ಆರು ತಿಂಗಳಿಗೊಮ್ಮೆ ಈ ರೀತಿ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ೩೨ ವರ್ಷದ ಗೆಳೆತನ ತಮ್ಮ ಜೀವನದಲ್ಲಾಗುವ ಬೆಳವಣಿಗೆಗಳು, ಮಕ್ಕಳ ವಿದ್ಯಾಭ್ಯಾಸ, ಮುಂದಿನ ರೂಪರೇಷೆಗಳನ್ನ, ಸಾಮಾಜಿಕ ಆರ್ಥಿಕವಾಗಿ ಚರ್ಚೆ ಮಾಡಲು ಹಾಗೂ ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡಲು ಕೂಡ ಒಂದು ವೇದಿಕೆಯಾಗಿದೆ ಎಂದರು.

ಪತ್ರಕರ್ತ ಉಮೇಶ್ ಕುಮಾರ್, ಭಾರತೀಯ ಜೀವ ವಿಮಾ ನಿಗಮದ ಅಕೌಂಟೆAಟ್ ಈರಣ್ಣ, ಸ್ನೇಹಿತರಾದ ಧನಂಜಯ್, ರವಿ, ಭವಾನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net