

ತುಮಕೂರು : ರಾತ್ರೋರಾತ್ರಿ ಉದ್ಯಾನವನದೊಳಗಿನ ಧ್ಯಾನಕೇಂದ್ರಕ್ಕೆ ಹಾಕಲಾಗಿದ್ದ ನಾಮಫಲಕವನ್ನು ಪಾಲಿಕೆ ವ್ಯಾಪ್ತಿಯ 26ನೇ ವಾರ್ಡ್‌ನಲ್ಲಿ ಸ್ಥಳೀಯರ ಆಕ್ರೋಶದ ಕಾರಣಕ್ಕೆ ಬದಲಿಸಲಾಗಿದೆ.
26ನೇ ವಾರ್ಡ್‌ನ ಅಶೋಕನಗರದ ಚಂದ್ರಶೇಖರ ಆಜಾದ್ ಉದ್ಯಾನವನವನ್ನು ಸ್ಮಾರ್ಟ್‌ಸಿಟಿ ವತಿಯಿಂದ 16 ಲಕ್ಷ ರೂ., ವೆಚ್ಚದಲ್ಲಿ ‘ಸ್ಮಾರ್ಟ್ ಪಾರ್ಕ್’ ಆಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಪಾರ್ಕ್‌ನಲ್ಲಿ ನಿರ್ಮಿಸಿರುವ ಧ್ಯಾನಕೇಂದ್ರಕ್ಕೆ ಪಾಲಿಕೆ ಆರೋಗ್ಯಾಧಿಕಾರಿಯ ಸಹೋದರನ ಹೆಸರಿಟ್ಟಿದ್ದು ತೀವ್ರ ವಿವಾದ ಹುಟ್ಟುಹಾಕಿತ್ತು.
ರಘು ಧ್ಯಾನವನ : ಭೂಗಳ್ಳರ ಪಾಲಾಗುತ್ತಿದ್ದ ಪಾರ್ಕ್ ಅನ್ನು ಈ ಭಾಗದ ಜನರು ಹೋರಾಟ ಮಾಡಿ ಉಳಿಸಿ ಹತ್ತಾರು ವರ್ಷಗಳ ಹಿಂದೆಯೇ ಚಂದ್ರಶೇಖರ ಆಜಾದ್ ಪಾರ್ಕ್ ಎಂದು ನಾಮಕರಣ ಮಾಡಿದ್ದರು. ಈಗ ಸ್ಥಳೀಯ ಕಾರ್ಪೋರೇಟರ್ ಒತ್ತಾಸೆಯಂತೆ ಪಾರ್ಕ್ ಅಭಿವೃದ್ಧಿಯನ್ನು ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಳ್ಳಲಾಗಿತ್ತು. 16 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ವಾಕಿಂಗ್ ಪಾತ್, ಸಾರ್ವಜನಿಕರು ಕೆಲಹೊತ್ತು ವಿಶ್ರಾಂತಿ ಪಡೆಯಲು ಗ್ರಾನೈಟ್ ಬೆಂಚ್‌ಗಳು, ಜಿಮ್ ಉಪಕರಣಗಳು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಿ ಉದ್ಯಾನವನ ಸ್ಮಾರ್ಟ್‌ಗೊಳಿಸಲಾಗಿದೆ. ಈ ಉದ್ಯಾನವನದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಧ್ಯಾನಕೇಂದ್ರಕ್ಕೆ ರಘು ಧ್ಯಾನವನ ಎಂದು ಹೆಸರಿಡಲಾಗಿತ್ತು. ಅಶೋಕನಗರ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾಗಲಿ, ಸ್ಥಳೀಯರ ಜತೆಯಾಗಲಿ ಚರ್ಚಿಸದೆ ಪಾಲಿಕೆ ಅಧಿಕಾರಿಯೊಬ್ಬರ ಸಹೋದರ ಎಂಬ ಕಾರಣಕ್ಕೆ ಯಾರಿಗೂ ಪರಿಚಯವೇ ಇಲ್ಲದ, ಸಮಾಜಕ್ಕೆ ಏನೂ ಕೊಡುಗೆ ನೀಡದ ವ್ಯಕ್ತಿಯ ಹೆಸರನ್ನಿಟ್ಟಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಾರ್ಪೋರೇಟರ್ ಎಚ್.ಮಲ್ಲಿಕಾರ್ಜುನಯ್ಯ ರಾತ್ರೋರಾತ್ರಿ ಧ್ಯಾನಕೇಂದ್ರಕ್ಕೆ ಹಾಕಲಾಗಿದ್ದ ನಾಮಫಲಕ ತೆರವುಗೊಳಿಸಿ ಈಗ ಆಂಜನೇಯ ಸ್ವಾಮಿ ಧ್ಯಾನಕೇಂದ್ರ ಎಂದು ಹೆಸರು ಬದಲಿಸಿದ್ದಾರೆ. ಈಗ ಧ್ಯಾನಕೇಂದ್ರ ನಿರ್ಮಾಣಕ್ಕೆ ದಾನಿಗಳು ನೆರವು ನೀಡಿದ್ದರಿಂದ ಅವರ ಹೆಸರಿನ್ನಡಲಾಗಿತ್ತು ಎಂಬ ಸಬೂಬು ಹೇಳುತ್ತಿದ್ದಾರೆ.
ರಘು ಧ್ಯಾನವನ ಹೆಸರಿಗೆ ನನ್ನ ವಿರೋಧ ಇದೆ. ಹಾಗಾಗಿ, ಧ್ಯಾನಕೇಂದ್ರಕ್ಕೆ ಕೊಡುಗೆ ನೀಡಿದ್ದ ಆರೋಗ್ಯಾಧಿಕಾರಿ ಅವರ ಮನೆದೇವರು ಆಂಜನೇಯಸ್ವಾಮಿ ಹೆಸರಿಡಲಾಗಿದೆ. ಎಚ್.ಮಲ್ಲಿಕಾರ್ಜುನಯ್ಯ, ಕಾರ್ಪೋರೇಟರ್