ಧೈರ್ಯವೇ ಕರೊನಾಕ್ಕೆ ಮೊದಲ ಮದ್ದು

H19 Vidyanagar ps 1
Published on

ಹುಬ್ಬಳ್ಳಿ: ನನಗೆ ಕರೊನಾ ಪಾಸಿಟಿವ್ ಎಂದಾಗ ಮೊದಲ ದಿನ ಭಾರಿ ಭಯದಿಂದ ನರಳಿದ್ದೆ. ವಿದ್ಯಾನಗರ ಠಾಣೆ ಇನ್ಸ್​ಪೆಕ್ಟರ್ ಆನಂದ ಒನಕುದ್ರೆ ಹಾಗೂ ವೈದ್ಯರು ನೀಡಿದ ಧೈರ್ಯದಿಂದ ನಾನು ಕೇವಲ 8 ದಿನದಲ್ಲಿ ಗುಣಮುಖನಾಗಿ ಹೊರಬಂದಿದ್ದೇನೆ...

ಇದು ಕರೊನಾ ಗೆದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ವಿದ್ಯಾನಗರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್ ಬಸವರಾಜ ಚಲವಾದಿ ಅವರ ಮಾತು.

ಕಳೆದ ವಾರ ಮೃತಪಟ್ಟ ಎಎಸ್​ಐ ಗಿರಿಯಪ್ಪನವರ ಅವರೊಂದಿಗೆ ಚಾಲುಕ್ಯ ವಾಹನದಲ್ಲಿ ನಾನು ಚಾಲಕನಾಗಿದ್ದೆ. ಗಿರಿಯಪ್ಪನವರ ಅವರಿಗೆ ಸೋಂಕು ಕಾಣಿಸಿಕೊಂಡ ಬಳಿಕ ತಪಾಸಣೆಯಲ್ಲಿ ನನಗೂ ಪಾಸಿಟಿವ್ ಬಂದಿತ್ತು. ಜು. 12ರಂದು ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಗೆ ದಾಖಲಾದೆ.

ಕರೊನಾಕ್ಕಿಂತ ಹೆಚ್ಚಾಗಿ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ನಮ್ಮನ್ನು ಭಯಭೀತರನ್ನಾಗಿಸುತ್ತವೆ. ಮೊದಲು ಪಾಸಿಟಿವ್ ಬಂದ ಕೂಡಲೇ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತದ ಸಿಬ್ಬಂದಿ ಕರೆ ಮಾಡಿ ‘ನಿಮ್ಮ ಮನೆ ಎಲ್ಲಿ’ ಎಂದಾಗ ನಡುಕ ಶುರುವಾಗಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಇನ್ಸ್​ಪೆಕ್ಟರ್ ನಿತ್ಯವೂ ಕರೆ ಮಾಡಿ ಧೈರ್ಯ ತುಂಬಿದರು. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಆರೈಕೆ ಮಾಡಿದರು. ಅವರೆಲ್ಲ ಕಾಳಜಿ ವಹಿಸುವಾಗ ನಾನು ಹೆದರಬಾರದು ಎಂದು ಧೈರ್ಯ ತಂದುಕೊಂಡೆ.

ನನಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಯೋಗ, ಧ್ಯಾನ ಮಾಡುತ್ತಿದ್ದೆ. ಮನೆಯಿಂದ ತಂದಿದ್ದ ಕೆಟಲ್​ನಿಂದ ಬಿಸಿ ನೀರು, ಕಷಾಯ ಮಾಡಿಕೊಂಡು ಕುಡಿಯುತ್ತಿದ್ದೆ. 8 ದಿನದಲ್ಲಿ ಕರೊನಾ ಗೆದ್ದು ಬಂದೆ ಎಂದು ಹರ್ಷ ವ್ಯಕ್ತಪಡಿಸಿದರು.

ಧೈರ್ಯವೇ ಕರೊನಾಕ್ಕೆ ಮೊದಲ ಮದ್ದು. ಭಯ ಬಿಟ್ಟಾಕಿ ಸರ್ಕಾರದ ನಿಯಮ ಪಾಲಿಸಿ ಎನ್ನುತ್ತಾರೆ ಕಾನ್ಸ್​ಟೇಬಲ್ ಬಸವರಾಜ.

ಭವ್ಯ ಸ್ವಾಗತ

ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಕರೊನಾ ಸೇನಾನಿ ಕಾನ್ಸ್​ಟೇಬಲ್ ಬಸವರಾಜ ಚಲವಾದಿ ಅವರನ್ನು ವಿದ್ಯಾನಗರ ಠಾಣೆ ಪೊಲೀಸರು ಭಾನುವಾರ ಚಪ್ಪಾಳೆಯ ಸುರಿಮಳೆಯೊಂದಿಗೆ ಭವ್ಯವಾಗಿ ಸ್ವಾಗತಿಸಿದರು.

ಪೊಲೀಸ್ ಠಾಣೆಗೆ ಬಂದ ಬಸವರಾಜ ಅವರನ್ನು ಠಾಣೆಯ ಅಧಿಕಾರಿ, ಸಿಬ್ಬಂದಿ ಸ್ವಾಗತಿಸಿದರು. ಇನ್ಸ್​ಪೆಕ್ಟರ್ ಆನಂದ ಒನಕುದ್ರೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಹಣ್ಣು ಹಂಪಲ ಉಡುಗೊರೆ ನೀಡಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net