ಧೈರ್ಯವಾಗಿ ಶ್ರೀ ಗಂಧದ ಮರ ಬೆಳೆಯಿರಿ:ಕೆ. ಅಮರ ನಾರಾಯಣ ಕರೆ

ಧೈರ್ಯವಾಗಿ ಶ್ರೀ ಗಂಧದ ಮರ ಬೆಳೆಯಿರಿ:ಕೆ. ಅಮರ ನಾರಾಯಣ ಕರೆ
Published on

ಹಾಸನ: ಭವಿಷ್ಯದಲ್ಲಿ ಶ್ರೀಗಂಧ ಬೆಳೆಗಾರರಿಗೆ ಬಾರಿ ಬೇಡಿಕೆ ಬರಲಿದೆ. ಕರುನಾಡು ಮತ್ತೆ ಗಂಧದ ಬೀಡಾಗಲಿದೆ. ರೈತರು ಯಾವುದೇ ಅಡ್ಡಿ ಆತಂಕಗಳಿದ್ದರೂ ಎದೆಗುಂದದೆ ಶ್ರೀಗಂಧದ ಮರ ಬೆಳೆಸಿ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರ ನಾರಾಯಣ ಕರೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಹಾಸನ ಜಿಲ್ಲಾ ಘಟಕ ಸೋಮವಾರ ಆಯೋಜಿಸಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೇಡಿಕೆ ತಕ್ಕಂತೆ ಶ್ರೀಗಂಧ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಹೊರದೇಶಗಳ ಮೊರೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಲು ಹಾಗೂ ರೈತ ಬಂಧುಗಳು ಹೆಚ್ಚಿನ ಆದಾಯ ಗಳಿಸರು ಮತ್ತು ಪರಿಸರ ಸಮತೋಲನಗೊಳಿಸಲು ಶ್ರೀಗಂಧದ ಮರಗಳನ್ನು ಬೆಳೆಸಿರಿ ಎಂದು ಸಲಹೆ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಮಾತನಾಡಿ, ಶ್ರೀಗಂಧದ ಮರಗಳನ್ನು ಕಳ್ಳರಿಂದ ಉಳಿಸಿಕೊಳ್ಳಲು ಇಂದು ನಾನಾ ಬಗೆಯ ಅತ್ಯಾಧುನಿಕ ತಂತ್ರಜ್ಞಾನಗಳ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಶ್ರೀಗಂಧ ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಾಗ ಹೋರಾಡಲು ಸಂಘವಿದೆ ಎಂದು ಭರವಸೆ ನೀಡಿದರು.
ನಿವೃತ್ತ ಅರಣ್ಯಾಧಿಕಾರಿ ಶಾಂತಿಗ್ರಾಮದ ಲಕ್ಷ್ಮೀನಾರಾಯಣ ಮಾತನಾಡಿ, ಕೃಷಿ ಅರಣ್ಯ ಮತ್ತು ಶ್ರೀಗಂಧ ಬೆಳೆಗಾರರು ಖಾಸಗಿ ಹಿಡುವಳಿ ಜಮೀನುಗಳಲ್ಲಿ ಬೆಳೆದು ತದನಂತರ ಮರಗಳನ್ನು ಕಡಿಯುವ ಕುರಿತು ಅನುಸರಿಸಬೇಕಾದ ಕಾನೂನು ಕ್ರಮಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಆದೇಶಗಳು, ವಿನಾಯಿತಿಗೆ ಒಳಪಟ್ಟ ಮರಗಳು ಹಾಗೂ ಸದ್ಯದ ಶ್ರೀಗಂಧದ ಮಾರುಕಟ್ಟೆ ಮುಂತಾದ ಹಲವಾರು ಉಪಯುಕ್ತ ಮಾಹಿತಿಗಳನ್ನು ರೈತರಿಗೆ ತಿಳಿಸಿದರು.
ಸಭೆಯಲ್ಲಿ ಮುಖ್ಯೋಪಾದ್ಯಾಯ ಬಿ.ಡಿ. ಶಂಕರೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ.ಡಿ. ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹೆರಗು ವಾಸುದೇವ್, ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ರೈತಪರ ಹೋರಾಟಗಾರ ಮಂಜುನಾಥ್ ದತ್ತ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಂ. ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕರಿಕ್ಯಾತನಹಳ್ಳಿ ತುಳಸಿರಾಜ್, ಕಾರ್ಯದರ್ಶಿ ಜಿ. ರವಿಕುಮಾರ್ ದೂತನೂರು ಕಾವಲು, ಹಾಸನ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವಿಜಯ್ ಅಂಗಡಿ, ಪ್ರಗತಿಪರ ರೈತರಾದ ಗಿಡ್ಡೇಗೌಡ, ಹೊಯ್ಸಳ ಅಪ್ಪಾಜಿ, ಅನುಗನಾಳು ಕೃಷ್ಣಮೂರ್ತಿ, ಸೋಮಶೇಖರ, ಲಕ್ಷ್ಮೀ ಬಲರಾಮೇಗೌಡ, ಇಂದಿರಾಕುಮಾರ್, ಚಿಕ್ಕಡಲೂರು ಬೋರಣ್ಣಗೌಡ, ಪ್ರವೀಣ್, ಬಾಗೇಶಪುರ ಸಿದ್ದಣ್ಣ, ಮಲ್ಲಣ್ಣ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net