ಧೈರ್ಯದಿಂದ ಸಮಾಜದ ತಪ್ಪುಗಳನ್ನು ಬಿತ್ತರಿಸಿ

31Kush02
Published on

ಕುಶಾಲನಗರ: ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆಯಿದ್ದಂತೆ. ಹಲವು ತೊಡಕುಗಳನ್ನು ಸಮರ್ಥವಾಗಿ ಎದುರಿಸಿ ಸಮಾಜದ ತಪ್ಪುಗಳನ್ನು ಬಿತ್ತರಿಸಬೇಕು ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯಪಟ್ಟರು.

ಇಲ್ಲಿನ ಗಂಧದಕೋಟಿಯ ಅರಣ್ಯ ತರಬೇತಿ ಕೇಂದ್ರದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದುಗರನ್ನು ಪ್ರೋತ್ಸಾಹಿಸುವ ಕೆಲಸ ಪತ್ರಕರ್ತರಿಂದ ಆಗುತ್ತಿದೆ. ಸಮಾಜಕ್ಕೆ ಒಳಿತಾಗುವ, ನೊಂದವರಿಗೆ ನ್ಯಾಯ ಒದಗಿಸುವ, ರಾಜಕಾರಣಿಗಳನ್ನು ತಿದ್ದುವ ವರದಿಗಳು ಪತ್ರಕರ್ತರಿಂದ ಮೂಡಿಬರಬೇಕಿದೆ ಎಂದರು.

ಎಸಿಎಫ್ ಗೋಪಾಲ್ ಮಾತನಾಡಿ, ಅರಣ್ಯ ಕ್ಷೀಣಿಸಿದಂತೆ ಪರಿಸರ ಅಸಮತೋಲನ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯೀಕರಣಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಒತ್ತು ನೀಡಿದೆ. ಪ್ರತಿಯೊಬ್ಬರೂ ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುವಂತಾಗಬೇಕಿದೆ ಎಂದರು.

ಉದ್ಯಮಿ ವಿಶ್ವನಾಥನ್ ಮಾತನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ದಂಪತಿಗೆ ಗೌರವಿಸಲಾಯಿತು.

ಪತ್ರಕರ್ತರಾದ ಎಂ.ಎನ್.ಚಂದ್ರಮೋಹನ್, ಕೆ.ಕೆ.ನಾಗರಾಜಶೆಟ್ಟಿ, ಟಿ.ಆರ್.ಪ್ರಭುದೇವ್, ರಘು ಹೆಬ್ಬಾಲೆ, ವಿನೋದ್, ಇಸ್ಮಾಯಿಲ್ ಕಂಡಕೆರೆ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net