

ಚಿತ್ರದುರ್ಗ: ಹತ್ಯೆಗೊಳಗಾದ ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನೊಂದ ಕುಟುಂಬಕ್ಕೆ ಧೈರ್ಯ ಹೇಳಲು ಬಂದಿದ್ದೇವೆ ಹೊರತು, ರಾಜೀಸೂತ್ರಕ್ಕಲ್ಲ. ಈ ಕುರಿತು ಯಾರೂ ಯೋಚಿಸಬಾರದು ಎಂದರು.
ರೇಣುಕಸ್ವಾಮಿಯಿಂದ ತಪ್ಪಾಗಿರಬಹುದು. ಅದನ್ನು ಅಷ್ಟೊಂದು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಸರಿಯಲ್ಲ. ವಿಕಾರವಾಗಿ ಹತ್ಯೆಯಾಗಿದೆ. ನೊಂದ ಕುಟುಂಬದ ಜತೆ ಮುಂದಿನ ದಿನಗಳಲ್ಲೂ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಹಿಂದೆ ಸಿನಿರಂಗದೆಡೆ ಜನರಲ್ಲಿ ಗೌರವವಿತ್ತು. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರನಾಗ್‌ರಂಥ ಮಹನೀಯರು ಇದ್ದರು. ಈಗ ಯುವ ನಾಯಕರು ಹಾದಿ ತಪ್ಪುತ್ತಿದ್ದಾರೆ. ಘಟನೆಗೆ ಚಿತ್ರರಂಗ ಕಾರಣವಲ್ಲ, ಒಬ್ಬ ವ್ಯಕ್ತಿ ಇದರ ಹೊಣೆ ಹೊರಬೇಕಾಗಿದೆ. ಆತನಿಂದಾಗಿ ಚಿತ್ರರಂಗವಿಂದು ತಲೆ ತಗ್ಗಿಸುವಂತಾಗಿದೆ ಎಂದು ದರ್ಶನ್ ವಿರುದ್ಧ ಕಿಡಿ ಕಾರಿದ ಗೋವಿಂದು, ಚಿತ್ರರಂಗದ ಪರವಾಗಿ ನೊಂದ ಕುಟುಂಬದ ಕ್ಷಮೆ ಕೇಳುತ್ತೇವೆ ಎಂದರು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆದಿದೆ. ಪ್ರಭಾವಿಗಳು ಮೂಗು ತೂರಿಸಬಾರದೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದರು.
ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ, ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿತ್ತು. ಚಿತ್ರರಂಗದ ಮೇಲಿಂದು ಕರಾಳಛಾಯೆ ಮೂಡಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಹಾಗೂ ಅವರ ಮನ ಪರಿವರ್ತನೆಯಾಗಲಿ ಎಂದರು.
ಮತ್ತೊಬ್ಬ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಮಾತನಾಡಿ, ಆಗಬಾರದ್ದು ಆಗಿ ಹೋಗಿದೆ. ಚಿತ್ರರಂಗಕ್ಕೂ ನೋವಾಗಿದೆ. ಮನುಷ್ಯ ವಿವೇಕ, ಸಹನೆ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಹೇಳಿದರು.
ಚಿತ್ರದುರ್ಗ ಕಲೆಗಳ ತವರೂರು. ವೀರ ಮದಕರಿ ನಾಯಕರು ಆಳಿದ ನಾಡಿದು. ಇಲ್ಲಿ ರಾಜ್‌ಕುಮಾರ್ ನಾಟಕ ಪ್ರದರ್ಶನ ಬಳಿಕ ನಂಜನಗೂಡಿಗೆ ಬಂದು ಮದುವೆಯಾಗಿದ್ದರು. ರೇಣುಕಸ್ವಾಮಿಯ ಗರ್ಭಿಣಿ ಪತ್ನಿ, ವಯಸ್ಸಾದ ತಂದೆ-ತಾಯಿ ಗತಿ ಏನೆಂದು ಪ್ರಶ್ನಿಸಿದ ಅವರು, ನೊಂದ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ ಎಂದರು.
ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ನಾವು ಕ್ಷಮೆ ಕೇಳಲು ಬಂದಿದ್ದೇವೆ ಹೊರತು ರಾಜೀಗೆ ಅಲ್ಲ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆರೋಪಿ ನಟ ದರ್ಶನ್ ನಿಷೇಧದ ಕುರಿತಂತೆ ಕಲಾವಿದರು, ನಿರ್ಮಾಪಕರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳೊಂದಿಗೆ ಚರ್ಚಿಸಿ ಶೀಘ್ರ ಗಟ್ಟಿ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.
ನೊಂದ ಕುಟುಂಬಕ್ಕೆ ಮುಂದೆ ಕೂಡ ನೆರವಾಗುತ್ತೇವೆ. ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ದೂಷಣೆ ಬೇಡ. ಇತಿಹಾಸದಲ್ಲೇ ಪ್ರಥಮ ಬಾರಿಗೆ ಆದ ಘಟನೆಯಿಂದಾಗಿ ದಿಗ್ಭ್ರಮೆಗೆ ಒಳಗಾಗಿರುವ ನಟರು, ಘಟನೆ ಕುರಿತಂತೆ ಕೆಲವರು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದರು.
ಮಂಡಳಿ ಉಪಾಧ್ಯಕ್ಷ ಜಿ.ವೆಂಕಟೇಶ್, ಮುಖಂಡರಾದ ಬಿ.ಕಾಂತರಾಜ್, ಬಾ.ಮ.ಗಿರೀಶ್, ಕೆ.ಎಂ.ವೀರೇಶ್, ಜೆ.ಕೆ.ರಾಮಕೃಷ್ಣ, ಕರಿಸುಬ್ಬು, ಸುದರ್ಶನ್, ಸಿದ್ದರಾಜು, ಕುಮಾರ್, ಕೆಂಪಣ್ಣ, ಜಯಸಿಂಹ ಮುಸುರಿಇತರರು ಇದ್ದರು.
*ಶಾಮನೂರು ನೆರವಿನ ಭರವಸೆ
ಅನೇಕರು ನೊಂದ ಕುಟುಂಬದ ನೆರವಿಗೆ ಮುಂದೆ ಬಂದಿದ್ದಾರೆ. ಅಖಿಲಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ ಬಣಕಾರ್ ತಿಳಿಸಿದರು.