

ಹಾಸನ: 14ನೇ ಶತಮಾನದಲ್ಲಿ ಶಿವಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಅವರು ಅವಿದ್ಯಾವಂತಳಾದರೂ ಬುದ್ಧಿವಂತೆ, ಸುಸಂಸ್ಕೃತಿಗಳಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಮಹಾ ಧೀಮಂತ ಮಹಿಳೆ ಎಂದು ಸಾಹಿತಿಗಳಾದ ಸುಶೀಲಾ ಸೋಮಶೇಖರ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ರಾಮ್ ಪುರ ಎಂಬ ಗ್ರಾಮದಲ್ಲಿ ಜನಿಸಿದ ಹೇಮರೆಡ್ಡಿ ಮಲ್ಲಮ್ಮ ಅವರು ವೀರಶೈವ ಲಿಂಗಾಯತ ರೆಡ್ಡಿ ಮನೆತನಕ್ಕೆ ಸೇರಿದವರಾಗಿದ್ದಾರೆ. ಬಹಳ ಸಭ್ಯತೆಯುಳ್ಳ, ಪರಮ ಸಾದ್ವಿ ಹೆಣ್ಣು ಮಗಳು. ತನ್ನ ಅತ್ತೆ ಕೊಡುವ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಮೈದುನನ ಮನ ಪರಿವರ್ತನೆ ಮಾಡಿ ಕವಿಯಾಗಿ ಮಾಡಿದ ಮಹಾ ಮಹಿಳೆಯಾಗಿದ್ದಾಳೆ. ಇಂದು ನಾವು ಈ ರೀತಿಯ ಮಹಿಳೆಯಾಗಿ ಮಾರ್ಪಾಡಾಗ ಬೇಕು ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ, ಪ್ರತಿಯೊಂದು ಜಯಂತಿಗೂ ಅದರದೇ ಆದಂತಹ ಮಹತ್ವವಾದ ಹಿನ್ನೆಲೆ ಇದೆ. ಹಾಗಾಗಿ ಮಹನೀಯರ ಜಯಂತಿಗಳಿಗೆ ಯಾವುದೇ ಜಾತಿ, ಧರ್ಮ, ಭೇದಭಾವವಿಲ್ಲದೆ ಎಲ್ಲರೂ ಸೇರಿ ಆಚರಿಸಬೇಕು. ಅವರ ತತ್ವ, ಸಾಧನೆ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಹುಲಿವಾಲ ಮೋಹನ್ ಕುಮಾರ್ ಅವರು ಮಾತನಾಡಿಮ, ಹೇಮರೆಡ್ಡಿ ಮಲ್ಲಮ್ಮನಂತಹವರು ಕೆಲವೇ ಕೆಲವು ಸಾಹಿತ್ಯ ಆಸಕ್ತಿಯುಳ್ಳವರಿಗೆ ಪರಿಚಯವಾಗಿರುತ್ತಾರೆ. ಆದರೆ, ಇಂತಹ ಜಯಂತಿಗಳನ್ನು ಆಚರಿಸುವ ಮೂಲಕ ಅವರು ಸಾಧನೆಗಳನ್ನು ನಾವೆಲ್ಲರೂ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ಸಮುದಾಯದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.