ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಸಲ್ಲಿಸಲು ಡಿಸಿ ಸೂಚನೆ

ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಸಲ್ಲಿಸಲು ಡಿಸಿ ಸೂಚನೆ
Published on

ಹಾಸನ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶಕ್ಕಾಗಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ದೇವಾಲಯಗಳು, ಚರ್ಚ್, ಮಸೀದಿ ಮತ್ತು ಎಲ್ಲಾ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ದರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲವು ನಿಯಮಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಎ,ಬಿ,ಸಿ ವರ್ಗದ ಮುಜರಾಯಿ ಮತ್ತು ಖಾಸಗಿ ದೇವಾಲಯಗಳು ಹಾಗೂ ಚರ್ಚ್, ಮಸೀದಿ ಮತ್ತು ಇತರೆ ಎಲ್ಲಾ ಧಾರ್ಮಿಕ ಸಂಸ್ಥೆಗಳು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದು ತೀಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ’ಎ’ ’ಬಿ’ ’ಸಿ’ ವರ್ಗದ ಮುಜರಾಯಿ ಮತ್ತು ಖಾಸಗಿ ದೇವಾಲಯಗಳು ಹಾಗೂ ಚರ್ಚ್, ಮಸೀದಿ ಮತ್ತು ಇತರ ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ ಜನ ಸಂದಣಿಯಾಗುವ ಮುಂಚಿತವಾಗಿಯೇ ಮಾಹಿತಿಯನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಒದಗಿಸಬೇಕು.
ಎಲ್ಲಾ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಚುನಾವಣಾ ತಪಾಸಣಾ ತಂಡವನ್ನು ತಮ್ಮ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳುಹಿಸಿ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಮುಖಂಡರ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ್ದಾರೆಯೇ ಎಂದು ಪರಿಶೀಲಿಸಬೇಕು. ಯಾವುದೇ ಧಾರ್ಮಿಕ ಸಂಸ್ಥೆಗಳನ್ನು ರಾಜಕೀಯ ಚಟುವಟಿಕೆಗಳ ಪ್ರಚಾರಕ್ಕಾಗಿ ಬಳಸಬಾರದೆಂದು ಕಾನೂನಿನಲ್ಲಿಯೂ ಸ್ಪಷ್ಟವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಮಾಹಿತಿ ನೀಡದಿದ್ದಲ್ಲಿ ಅಂತಹವರ ವಿರುದ್ಧ ಐ.ಪಿ.ಸಿ ಕಾಯ್ದೆ 176 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ-1951 ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net