

ಅರಸೀಕೆರೆ: ಧಾರ್ಮಿಕ ವಿಚಾರಧಾರೆಗಳನ್ನು ಮನುಕುಲಕ್ಕೆ ಪಸರಿಸುವ ಕೆಲಸವನ್ನು ಮಠಮಾನ್ಯಗಳು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಣಕಟ್ಟೆ ಹೋಬಳಿ ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ ವಿರಕ್ತಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಸಿದ್ದಬಸವ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕೆಲ ಪೀಠಾಧಿಪತಿಗಳು ರಾಜಕೀಯ, ಆಡಳಿತಾತ್ಮಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಪ್ರವೃತ್ತಿ ಬೆಳಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವು ರಾಜಕಾರಣಿಗಳು ಮಠದ ಆಗುಹೋಗುಗಳನ್ನು ನಿರ್ವಹಿಸಲು ಮುಂದಾಗುತ್ತಿರುವುದು ದುರದೃಷ್ಟಕರ ಸಂಗತಿ. ಇಂತಹ ಪ್ರವೃತ್ತಿ ಮುಂದುವರಿದಲ್ಲಿ ಯಾವ ಪುರುಷಾರ್ಥಕ್ಕೆ ಮಠಗಳಲ್ಲಿ ಸ್ವಾಮೀಜಿ ಇರಬೇಕು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಹಿರಿಯ, ಕಿರಿಯ ಸ್ವಾಮೀಜಿಗಳು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರಲ್ಲದೆ, ಮನುಕುಲದ ಏಳಿಗೆಗೆ ಶರಣರ, ಶ್ರೀಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಡಿ.ಎಂ.ಕುರ್ಕೆ ವಿರಕ್ತಮಠದ ಶಶಿಶೇಖರ ಸಿದ್ಧಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಯುವ ಪೀಳಿಗೆಯಲ್ಲಿ ದೇವರು, ಧರ್ಮ, ಭಕ್ತಿ, ಪೂಜ್ಯ ಮನೋಭಾವ ಕ್ಷೀಣಿಸುತ್ತಿದೆ. ಹನೆರಡನೇ ಶತಮಾನದ ಬಸವಾದಿ ಶಿವಶರಣರು ದೈವಾಂಶ ಸಂಭೂತರಾಗಿ ಹುಟ್ಟಿ ಸಮಾಜದಲ್ಲಿನ ಮೇಲು-ಕೀಳುಗಳನ್ನು ತೊಡೆದು ಹಾಕುಲು ಹೋರಾಟ ನಡೆಸಿದ ನೇತಾರರು ಎಂದು ಬಣ್ಣಿಸಿದರು.
ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಬಿದರೆ ಡೊಡ್ಡಮಠದ ಶ್ರೀ ಪ್ರಭುಕುಮಾರಸ್ವಾಮಿ, ಜಿ.ಮಾದಿಹಳ್ಳಿ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೀರೂರು ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೆಲಗೂರು ಪೀಠದ ಶ್ರೀ ವಿಜಯ ಮಾರುತಿ ಶರ್ಮ ಗುರೂಜಿ, ಉಪನ್ಯಾಸಕ ಪರಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.