

ಶೃಂಗೇರಿ: ಶ್ರೀವ್ಯಾಸ ಮಹರ್ಷಿಗಳ ಜನ್ಮ ದಿನಾಚರಣೆಯೇ ಗುರುಪೂರ್ಣಿಮೆ. ಬೃಹತ್ ವೇದಗಳನ್ನೂ, ಹದಿನೆಂಟು ಪುರಾಣಗಳನ್ನೂ ವಿಂಗಡಿಸಿ ಸರಳೀಕರಿಸಿದವರು ವೇದವ್ಯಾಸರು. ಜನಸಾಮಾನ್ಯರಿಗೂ ಧಾರ್ಮಿಕ ಮೌಲ್ಯಗಳ ಅರಿವು ಮೂಡಿಸುವುದರಲ್ಲಿ ಅವರ ಪರಿಶ್ರಮ ಅನನ್ಯ ಎಂದು ಸಂಸ್ಕೃತ ಉಪನ್ಯಾಸಕ ಮಹೇಶ್ ಕಾಕತ್ಕರ್ ತಿಳಿಸಿದರು.
ಗುರುವಾರ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ಗುರುಪೂರ್ಣಿಮೆಯಲ್ಲಿ ಮಾತನಾಡಿ, ವೇದವ್ಯಾಸರು ಹಿಂದು ಧರ್ಮದ ಪ್ರಮುಖ ಋಷಿ. ವೇದಗಳನ್ನು ವಿಂಗಡಿಸಿದ್ದರಿಂದ ಅವರನ್ನು ವೇದವ್ಯಾಸ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅವರು ಭಾರತೀಯ ಸಂಸ್ಕೃತಿಯ ಮಹಾಗುರು. ವಿಷ್ಣುಪುರಾಣ ಮತ್ತು ಶಿವಪುರಾಣ ಮುಂತಾದ ಪುರಾಣಗಳು ಹಿಂದು ಧರ್ಮದ ಇತಿಹಾಸ ಮತ್ತು ನೈತಿಕ ಮೌಲ್ಯಗಳನ್ನು ವಿವರಿಸುತ್ತವೆ ಎಂದರು. ಹಿರಿಯ ಯೋಗಬಂಧು ಗಾಯತ್ರಿ ಆರ್. ಭಟ್ ಅವರನ್ನು ಗೌರವಿಸಲಾಯಿತು. ಯೋಗ ಶಿಕ್ಷಣ ಸಮಿತಿ ತಾಲೂಕು ಸಂಚಾಲಕ ನಾಗೇಶ್ ಕಾಮತ್, ಯೋಗ ಶಿಕ್ಷಕಿ ಪದ್ಮಾ ಸುಬ್ರಹ್ಮಣ್ಯ, ಡಾ. ದಯಾನಂದ್, ಮಂಜುನಾಥ್ ಗೌಡ, ರಮೇಶ್ ಶೂನ್ಯ ಇದ್ದರು.