

ಸೊರಬ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿವೆ. ಈ ನಡುವೆ ದಾನಿಗಳು ಸಹ ಶ್ರೀ ಮಠದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈ ಜೋಡಿಸುತ್ತಿರುವುದು ಸ್ವಾಗತಾರ್ಹ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶುಕ್ರವಾರ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಶ್ರೀ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳವರ ಕರ್ತಗದ್ದಿಗೆ ಶಿಲಾ ಮಂಟಪದ ಪ್ರಧಾನ ಬಾಗಿಲ ಪೂಜೆ ಹಾಗೂ ಮಹಾದ್ವಾರ ಅಡಿಗಲ್ಲು ಸಮಾರಂಭದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀಮಠದ ಆವರಣದಲ್ಲಿರುವ ಶ್ರೀ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳ ಗದ್ದುಗೆ ಪವಾಡದಂತೆ ಗೋಚರವಾಗಿದೆ. ಗದ್ದುಗೆಯ ಶಿಲಾಮಯ ಮಂಟಪ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಸಂಸದರ ಅನುದಾನದಲ್ಲಿ 2 ಕೋಟಿ ರೂ. ನೀಡಲಾಗಿದೆ. ಮಠದ ಅಭಿವೃದ್ಧಿಗೆ ಶ್ರೀ ಮಹಾಂತ ಸ್ವಾಮೀಜಿ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕರೊನಾದಂತಹ ಕ್ಲಿಷ್ಟಕರ ಸನ್ನಿವೇಷದಲ್ಲಿಯೂ ಮಠದ ಅಭಿವೃದ್ಧಿ ಕಾರ್ಯ ಸಾಗುತ್ತ ಬಂದಿದೆ ಎಂದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಮೆಕ್ಕಜೋಳ ಮತ್ತು ಭತ್ತದ ಬೆಳೆಗಳು ಹಾಳಾಗಿರುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಪರಿಹಾರ ನೀಡುವ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೆ ಅಭಿವೃದ್ಧಿಯ ಪರ್ವವೇ ಸಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದರು.
ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಶಿರಾಳಕೊಪ್ಪದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.