ಧಾರ್ಮಿಕ ಕೇಂದ್ರವಾಗುತ್ತಿರುವ ಅಂಗನವಾಡಿಗಳು

27 gk
Published on

ಗೋಣಿಕೊಪ್ಪ: ಅಂಗನವಾಡಿ ನೌಕರರ ಬೇಡಿಕೆ ಈಡೇರಿಸದ ಸರ್ಕಾರ, ಅಂಗನವಾಡಿ ಕೇಂದ್ರಗಳನ್ನು ಧಾರ್ಮಿಕ ಕೇಂದ್ರವನ್ನಾಗಿ ರೂಪಿಸಲು ಮುಂದಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಟೀಕಿಸಿದರು.

ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸೀಮಂತ, ನಾಮಕರಣ, ಅನ್ನಪ್ರಾಸನ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದೆ. ಆದರೆ, ಪೌಷ್ಟಿಕ ಆಹಾರದ ಹಣ, ಕಟ್ಟಡಗಳ ಬಾಡಿಗೆ ಹಣ, ಕನಿಷ್ಠ ಗೌರವಧನ ನೌಕರರಿಗೆ ತಲುಪುತ್ತಿಲ್ಲ. 3 ತಿಂಗಳಿಂದ ವೇತನ ಸಿಗದೆ ನೌಕರರು ಪರದಾಡುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆ ಮಾಡದೆ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸುವುದರಿಂದ ಪ್ರಯೋಜನವಿಲ್ಲ. ಮಕ್ಕಳು ಮತ್ತು ನೌಕರರ ಕ್ಷೇಮಕ್ಕೆ ಆದ್ಯತೆ ನೀಡಲಿ ಎಂದು ಆಗ್ರಹಿಸಿದರು.


ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ವೇತನ ಮೂರು ಕಂತುಗಳಲ್ಲಿ ವಿತರಣೆಯಾಗಬೇಕಿತ್ತು. ಆದರೆ, 2 ಕಂತು ಹಾಗೇ ಉಳಿದಿದೆ. ಸಮರ್ಪಕವಾಗಿ ವೇತನ ನೀಡಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಅಂಗನವಾಡಿ ಕೇಂದ್ರದ ನಿರ್ವಹಣೆ, ಗ್ಯಾಸ್, ಪೌಷ್ಟಿಕ ಆಹಾರದ ಬಾಪ್ತು, ಬಾಡಿಗೆ ಎಲ್ಲವನ್ನೂ ನೌಕರರರೇ ಭರಿಸುತ್ತಿದ್ದಾರೆ. ವೇತನ ಪಡೆದುಕೊಳ್ಳಲಾಗದ ಕಷ್ಟಕಾಲ ದಲ್ಲಿ ನಿರ್ವಹಣೆ ಜವಾಬ್ದಾರಿ ಕೂಡ ಹೆಚ್ಚು ಒತ್ತಡಕ್ಕೆ ಸಿಲುಕುವಂತಾಗಿದೆ. ಅಂಗನವಾಡಿ ಕೇಂದ್ರದ ಹೆಸರು ತೆಗೆದು ಪೋಷಣ್ ಕೇಂದ್ರವನ್ನಾಗಿ ರೂಪಿಸುವ ಹುನ್ನಾರದಿಂದ ನೌಕರರರು ಹುದ್ದೆ ಕಳೆದುಕೊಳ್ಳುವ ಆತಂಕ ಇದೆ ಎಂದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಾಬು ಮಾತನಾಡಿ, ಸರ್ಕಾರ ನೌಕರರ ಕಾಯ್ದೆಗೆ ಅನುಗುಣವಾಗಿ ವೇತನ ನೀಡಲು ಮುಂದಾಗಬೇಕು. ಕನಿಷ್ಠ ವೇತನ ನೀಡದ ಸರ್ಕಾರದಿಂದ ಹೆಚ್ಚು ನಿರೀಕ್ಷೆ ಅಸಾಧ್ಯ. ಹೋರಾಟದಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಎಂದರು.


ಕ್ಷೇಮನಿಧಿ ಚೆಕ್ ವಿತರಣೆ ಮಾಡಲಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಸೆಂಬರ್‌ನಲ್ಲಿ ನಡೆಸುವ ಮುಷ್ಕರಕ್ಕೆ ಬೆಂಬಲ ಸೂಚಿಸಲು ಸಭೆ ನಿರ್ಧರಿಸಿತು. ಗೌರವ ಅಧ್ಯಕ್ಷೆ ಚೇಂದೀರ ಕಾವೇರಮ್ಮ, ತಾಲೂಕು ಅಧ್ಯಕ್ಷೆ ವಿ.ಎಸ್.ಸುಮಿತ್ರ, ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ, ಕ್ಷೇಮನಿಧಿ ಅಧ್ಯಕ್ಷೆ ಬಿ.ಕೆ.ಸರೋಜಾ, ಕಾರ್ಯದರ್ಶಿ ಪೂವಮ್ಮ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net