

ನುಗ್ಗೇಹಳ್ಳಿ: ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಧಾರ್ಮಿಕ ಕೇಂದ್ರಗಳು, ಪ್ರಾರ್ಥನಾ ಮಂದಿರಗಳು ಹೆಚ್ಚಾಗಿ ನಿರ್ಮಾಣವಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶನಿವಾರ ತಿಳಿಸಿದರು.
ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪುರಾಣ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇಗುಲದ ನೂತನ ವಿಮಾನ ಗೋಪುರ ಹಾಗೂ ಕುಂಭಾಭಿಷೇಕ ಗರುಡಗಂಬ ಮಹಾದ್ವಾರ ಲೋಕಾರ್ಪಣೆಯ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಹಳ್ಳಿಗಳಲ್ಲಿ ಶಾಂತಿ ನೆಮ್ಮದಿ ಬೇಕಾಗಿದೆ. ದ್ವೇಷ, ಅಸೂಯೆ ಬಿಟ್ಟು ಒಗ್ಗಟ್ಟಾಗಿ ಹಳ್ಳಿಗಳ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಮುದ್ದನಹಳ್ಳಿ ಗ್ರಾಮದ ಅಭಿವೃದ್ಧಿಗೆ 40 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಮಾಡಲಾಗಿದೆ. ಟ್ಯಾಂಕ್ ಮಂಜೂರಾಗಿದೆ ಎಂದು ತಿಳಿಸಿದರು.
ನುಗ್ಗೇಹಳ್ಳಿ ಪುರ ವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕ್ಷೇತ್ರದ ಶಾಸಕರು ಹಳ್ಳಿಗಳ ಅಭಿವೃದ್ಧಿಗೆ ಕೆರೆಗಳಿಗೆ ನದಿ ನೀರು ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಹಾಗೂ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಿಯಾಯಿತಿ ದರದ ಸಾಲ ವಿತರಣೆ ಮಾಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವುದನ್ನು ಸ್ಮರಿಸಿದರು.
ಸಮಾರಂಭದಲ್ಲಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಮುಖಂಡ ಶಿವಸ್ವಾಮಿ, ಮುಖಂಡರಾದ ಶಿವನಾಗೇಂದ್ರ ಬಾಬು, ತೋಟಿ ನಾಗರಾಜ್, ದೊರೆಸ್ವಾಮಿ, ಎಂ.ಟಿ .ರಂಗೇಗೌಡ, ನಿವೃತ್ತ ಸೈನಿಕ ಇಂದ್ರೇಶ್, ಪುಟ್ಟಸ್ವಾಮಿ, ತೆಂಕನಹಳ್ಳಿ ರಂಗೇಗೌಡ, ಕಾರ್ಮಿಕ ಇಲಾಖೆ ಅಧಿಕಾರಿ ಮೋಹನ್, ಕಾರ್ಯನಿರ್ವಹಣಾಧಿಕಾರಿ ವಿನಯ್, ಶಿಲ್ಪಿ ತಾತಯ್ಯ, ಧರಣಿ ಕುಮಾರ್, ವಿಠ್ಠಲ್, ಪಟೇಲ್ ಕುಮಾರ್, ಯುವ ಮುಖಂಡ ಸಂಪತ್ ಕುಮಾರ್, ಬದ್ದಿಕೆರೆ ಮಂಜೇಗೌಡ, ತೊಪೇಗೌಡ, ಕೃಷ್ಣೇಗೌಡ, ಎಂ.ಜಿ. ಬಸವರಾಜು, ಯುವರಾಜ್, ಬಿ.ಎಂ.ಟಿ.ಸಿ. ನಟರಾಜ್, ಶಶಿಧರ್, ಶ್ರೀ ರಾಮಾಂಜನೇಯ ಯುವಕ ಸಂಘದ ಸದಸ್ಯರು ಇದ್ದರು.