ಧಾರ್ಮಿಕ ಕೇಂದ್ರಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ

IMG-20250203-WA0246
Published on

ಆಲೂರು: ದೇವಾಲಯಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೋ ಅವುಗಳ ಪಾವಿತ್ರೃ ಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ ಎಂದು ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಆಲೂರು ಪಟ್ಟಣ ಆಶಾ ಬಡಾವಣೆಯಲ್ಲಿ ಸೋಮವಾರ ನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಉದ್ಘಾಟನೆ ಮತ್ತು ವಿಮಾನ ಗೋಪುರ ಕಳಶಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವಾಲಯಗಳು ಜೀರ್ಣೋದ್ದಾರವಾದಂತೆ ಮನುಷ್ಯನ ಜೀವನವೂ ಉತ್ತಮವಾಗಬೇಕು. ಧಾರ್ಮಿಕ ಕೇಂದ್ರಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಮಠ, ಮಂದಿರ ಮೊದಲಾದ ಧಾರ್ಮಿಕ ಕೇಂದ್ರಗಳು ದೇಶಕ್ಕೆ ಅಗತ್ಯವಿದೆ. ಮಹಿಳೆಯರ ಸಬಲೀಕರಣದಿಂದ ಸಮಾಜ, ಒಂದು ಕುಟುಂಬ ಬದಲಾವಣೆ ಸಾಧ್ಯ. ಶಿಕ್ಷಣದಿಂದ ಬಡತನವನ್ನು ನಿವಾರಿಸಬಹುದು ಎಂದು ಹೇಳಿದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರದ ಅನುದಾನದಲ್ಲಿ ದೇವಸ್ಥಾನ ನಿರ್ಮಿಸುವುದಕ್ಕಿಂತ ಮಿಗಿಲಾಗಿ ಭಕ್ತರ ಸಹಾಯದಿಂದ ನಿರ್ಮಾಣವಾಗುವುದು ಸಂತಸದ ಸಂಗತಿ ಎಂದರು. ಆರೋಗ್ಯಪೂರ್ಣ ಸಮಾಜಕ್ಕೆ ಮಠ, ಮಂದಿರಗಳು ಬೇಕು. ವಿದೇಶಿಗರೂ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಜನರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ಅರ್ಚಕ ಶ್ರೀ ವೆಂಕಟೇಶ್ ಕಶ್ಯಪ್ ಹಾಗೂ ಶಿಷ್ಯವೃಂದದವರಿಂದ ಪ್ರಾಣಪ್ರತಿಷ್ಠಾಪನಾ ಹೋಮ, ಶಾಂತಿಹೋಮ, ಅಷ್ಟಬಲಿ ಸಮೇತ ಕದಲಿಛೇದನ ಕಾಮಧೇನು ಸಮೇತ ಶ್ರೀಯವರ ನೇತ್ರಸಂಕಲನ ದರ್ಪಣ ದರ್ಶನ, ಮಹಾಪೂರ್ಣಾಹುತಿ, ಶ್ರೀಯವರಿಗೆ ಅಷ್ಟಾವಧಾನ ಸೇವೆ, ಸಹಸ್ರನಾಮಾರ್ಚನೆ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ನೂತನ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ನೆರವಾದ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷ ಶ್ರೀ ಧರ್ಮರಾಜೇಂದ್ರ ಸ್ವಾಮಿಜಿ, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ. ರೇಣುಕಾ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಗುತ್ತಿಗೆದಾರ ವಿಜಯಕುಮಾರ ಹಂತಮನೆ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹಳೆ ಆಲೂರು, ಸದಸ್ಯರಾದ ನಾಗರಾಜ್, ಗಜೇಂದ್ರ, ನಾಗರಾಜ್, ಉಮಾ ರವಿಪ್ರಕಾಶ್ ವಿಗ್ರಹದಾನಿ ಕುಮಾರ್ ಹಳೆ ಆಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net