ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ

29Jaggu7
ಹುಕ್ಕೇರಿ ಹಿರೇಮಠದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜರುಗಿತು. ಸುಮಂಗಲಾ ಶಿಂಥ್ರಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೇಣುಕ ಗಡದೇಶ್ವರ ದೇವರು ಇದ್ದರು.
Published on

ಬೆಳಗಾವಿ: ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲೆ ಸುಮಂಗಲಾ ಶಿಂಥ್ರಿ ಹೇಳಿದರು.

ನಗರದ ಹುಕ್ಕೇರಿ ಹಿರೇಮಠದಲ್ಲಿ ಶುಕ್ರವಾರ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರಾವಣ ಎಂದರೆ ಎಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಮಠ, ಮಾನ್ಯಗಳಲ್ಲಿ ರುದ್ರಾಭಿಷೇಕ, ಪುರಾಣ, ಪ್ರವಚನ ಕಾರ್ಯಕ್ರಮಗಳು ಜರುಗುತ್ತವೆ. ಅದೇ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠದ ಬೆಳಗಾವಿ ಶ್ರೀಮಠದಲ್ಲಿಯೂ ಕಾರ್ಯಕ್ರಮ ಜರಗುತ್ತಿದ್ದು, ಭಕ್ತರು ಲಾಭ ಪಡೆದುಕೊಳ್ಳಬೇಕು ಎಂದರು.

ಶ್ರಾವಣ ಮಾಸದಂದು ಮನೆಯಲ್ಲಿಯೇ ಎಲ್ಲರೂ ಒಟ್ಟಿಗೆ ಸೇರಿ ಇಷ್ಟಲಿಂಗ ಪೂಜೆ ಮಾಡಿದರೆ ಅದರಿಂದ ಸಿಗುವ ನೆಮ್ಮದಿ ಎಲ್ಲಿಯೂ ಸಿಗುವುದಿಲ್ಲ ಎಂದರು. ಕಟಕೋಳ ಎಂ. ಚಂದರಗಿ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು ವಿಶೇಷವಾಗಿ ರುದ್ರಪಠಣ ಮಾಡಿದರು. ಚಿಕ್ಕೋಡಿ ವೇದಮೂರ್ತಿ ಮಹಾಂತೇಶ ಶಾಸ್ತ್ರಿಗಳು, ಶಿವಪುತ್ರ ಶಾಸ್ತ್ರಿಗಳು, ಉಗರಕೋಡದ ಮಹಾಂತೇಶ ಶಾಸ್ತ್ರಿಗಳು, ಚೇತನಕುಮಾರ ಶಾಸ್ತ್ರಿಗಳು ವೈದಿಕತ್ವ ನೆರವೇರಿಸಿದರು. ದಡ್ಡಿ ಗ್ರಾಮದ ಶಿವಾನಂದ ಮುಂಗರವಾಡಿ ಉಪಸ್ಥಿತರಿದ್ದರು.

ನಿತ್ಯ ಇಷ್ಟಲಿಂಗ ಪೂಜೆ: ಹುಕ್ಕೇರಿ ಹಿರೇಮಠದಲ್ಲಿ ಜು.29ರಿಂದ ಆ.26ರವರೆಗೆ ನಿತ್ಯ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಗುರುಶಾಂತೇಶ್ವರರ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಪೂಜೆ ಬೆಳಗ್ಗೆ 8ರಿಂದ ನಡೆಯಲಿದೆ. ಸಂಜೆ 6 ಗಂಟೆಗೆ ಕುಂಕುಮಾರ್ಚನೆ ಜರುಗಲಿದ್ದು, ಆ.24ರ ಬುಧವಾರ ಮಠದಲ್ಲಿ ಇಷ್ಟಲಿಂಗ ದೀಕ್ಷೆ, ಅಯ್ಯಚಾರ ಕಾರ್ಯಕ್ರಮ ಜರುಗಲಿವೆ. ಅಂದು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಭಕ್ತರಿಗೆ ಮಹಾಪ್ರಸಾದ ಹಾಗೂ 57ನೇ ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net