

ಅರಸೀಕೆರೆ: ವಿಘ್ನ ವಿನಾಶಕನ ಕೃಪೆ ದೊರೆತರೆ ಎಲ್ಲ ಸಂಕಷ್ಟಗಳು ದೂರವಾಗಲಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನರೇಣುಕ ಡಾ.ಶ್ರೀ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸಂಪ್ರದಾಯದಂತೆ ನಗರದ ಗಣಪತಿ ಪೆಂಡಾಲ್‌ಗೆ ಮಂಗಳವಾರ ಆಗಮಿಸಿ ವಿನಾಯಕನಿಗೆ ಪೂಜೆ ಸಲ್ಲಿಸಿದ ಶ್ರೀಗಳು ಬಳಿಕ ಮಾತನಾಡಿ, ದೇವರ ಸ್ಮರಣೆ ಹಾಗೂ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸಂಸ್ಕೃತಿ ಉಳಿಸಿ, ಬೆಳೆಸುವ ಉದ್ದೇಶದಿಂದ ಪೂರ್ವಿಕರು ಹಬ್ಬ, ಹರಿದಿನಗಳಲ್ಲಿ ಸಂಭ್ರಮದಿಂದ ಭಾಗಿಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಇಂತಹ ಪ್ರವೃತ್ತಿಯಿಂದ ಹಿಂದೆ ಸರಿಯುತ್ತಿರುವುದು ಆತಂಕಕಾರಿ ಎಂದು ನುಡಿದರು.
ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಸಂದೇಶವನ್ನು ತಪ್ಪದೆ ಪಾಲಿಸಬೇಕು. ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ್ದು, ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಹಸನಾಗಲಿದೆ ಎಂದು ಧರ್ಮ ಸಂದೇಶ ನೀಡಿದರು.
ಸುಕ್ಷೇತ್ರ ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ನಾಗಭೂಷಣ್, ಬಸವರಾಜು, ಮಲ್ಲೇಶ್, ಗಣಪತಿ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.