

ಖಾನಾಪುರ: ಖಾನಾಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ನದಿ ನಾಲೆಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚುತ್ತಿದೆ. ಅನಮೋಡ್ ಮೂಲಕ ಗೋವಾ ರಾಜ್ಯ ಸಂಪರ್ಕಿಸುವ ಹೆಮ್ಮಡಗಾ-ಸಿಂಧನೂರು ರಾಜ್ಯ ಹೆದ್ದಾರಿಯಲ್ಲಿ ಹಾಲತ್ರಿ ನದಿ ಸೇತುವೆ ಜಲಾವೃತಗೊಂಡಿದ್ದರಿಂದ ಸುಮಾರು 30 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಬುಧವಾರ ರಾತ್ರಿಯಿಂದ ಆರಂಭವಾದ ಧಾರಾಕಾರ ಮಳೆ ಗುರುವಾರವೂ ಮುಂದುವರಿದಿದೆ. ಪಶ್ಚಿಮ ಭಾಗದ ಕಣಕುಂಬಿ, ಜಾಂಬೋಟಿ, ಅಮಗಾಂವ್, ಚಾಪೋಲಿ ಸೇರಿ ಸುತ್ತಮುತ್ತಲ ಭಾಗದಲ್ಲಿ ಮಳೆ ಅಬ್ಬರ ಹೆಚ್ಚುತ್ತಿದೆ. ಪರಿಣಾಮ ಜಲಮೂಲಗಳ ಉಕ್ಕಿ ಹರಿಯುತ್ತಿವೆ.
ಖಾನಾಪುರದಿಂದ 6 ಕಿಮೀ ದೂರದಲ್ಲಿರುವ ನೆರಸಾ ಗ್ರಾಮದ ಬಳಿ ಹರಿಯುವ ಹಾಲತ್ರಿ ನದಿಯ ಸೇತುವೆ ಮೇಲೆ ಒಂದು ಅಡಿ ನೀರು ನಿಂತಿತ್ತು. ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದ್ದು, ಅಪಾಯ ತಪ್ಪಿಸುವ ಉದ್ದೇಶದಿಂದ ಖಾನಾಪುರ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಸದ್ಯ ಸೇತುವೆ ಬಳಿ ಭದ್ರತೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಸೇತುವೆ ದಾಟಲು ಸಾಹಸ ಮಾಡುವವರ ಮೇಲೆ ನಿಗಾ ಇಡಲಾಗಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ಮಲಪ್ರಭಾ ನದಿಯೂ ತುಂಬಿ ಹರಿಯುತ್ತಿದೆ. ಹಬ್ಬನಹಟ್ಟಿ ಮಾರುತಿ ದೇವಸ್ಥಾನ ಜಲಾವೃತವಾಗಿದೆ. ಅಹಿತಕರ ಘಟನೆ ನಡೆಯದಂತೆ ಜಾಂಬೋಟಿ ಉಪವಿಭಾಗದ ಪೊಲೀಸರು ದೇಗುಲದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. 24 ಗಂಟೆಗಳಲ್ಲಿ ಖಾನಾಪುರ 42 ಮಿಮೀ, ನಾಗರಗಾಳಿ 70 ಮಿಮೀ. ಬಿಡಿ 40 ಮಿಮೀ, ಕಕ್ಕೇರಿ 60 ಮಿಮೀ, ಅಸೋಗಾ 50 ಮಿಮೀ, ಗುಂಜಿ 70 ಮಿಮೀ, ಲೋಂಡಾ 90 ಮಿಮೀ, ಜಾಂಬೋಟಿ 90 ಮಿಮೀ, ಕಣಕುಂಬಿಯಲ್ಲಿ 153 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.