

ಆರ್.ಕೃಷ್ಣ ಮೈಸೂರು
ನಿರೀಕ್ಷೆಗೂ ಮೀರಿ ಹಗಲು, ರಾತ್ರಿ ಎನ್ನದೆ ಧಾರಾಕಾರ ಸುರಿಯುತ್ತಿರುವ ಮಳೆ ನಗರದ ಜನತೆಗೆ ಹಲವು ಕಡೆ ಸಮಸ್ಯೆ ಉಂಟು ಮಾಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸಿದರೆ, ಈಗಾಗಲೇ ಡಾಂಬರ್ ಕಿತ್ತು ಗುಂಡಿ ಬಿದ್ದ ರಸ್ತೆಗಳು ಕೆರೆಯಂತಾಗಿವೆ. ಇದರೊಂದಿಗೆ ಕೆಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಫುಟ್‌ಪಾತ್, ಚರಂಡಿಗಳು ವಾಹನ ಸವಾರರು, ಜನರಿಗೆ ತೊಂದರೆ ತಂದೊಡ್ಡಿವೆ.
ಕುರಿಮಂಡಿ, ವಸ್ತು ಪ್ರದರ್ಶನದ ಅಮ್ಯೂಸ್‌ಮೆಂಟ್ ಪಾರ್ಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆಯ ಎದುರಿನ ಮಾರ್ಗ, ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ನಿರ್ವಹಣಾ ಕಾಲೇಜು ಎದುರಿನ ರಸ್ತೆ, ಆಕಾಶವಾಣಿ ಯಾದವಗಿರಿ ರಸ್ತೆ, ಅರವಿಂದನಗರ, ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆ, ಸಿದ್ಧಾರ್ಥನಗರದ ಕೇಂದ್ರ ಅಬಕಾರಿ ಸೀಮಾ ಸುಂಕ ಕಚೇರಿ ಮಾರ್ಗದ ರಸ್ತೆಯಲ್ಲಿ ಇಂತಹ ಅಧ್ವಾನಗಳು ಕಣ್ಣಿಗೆ ಕಾಣುತ್ತವೆ. ರಸ್ತೆಯನ್ನು ನಿರ್ಮಾಣ ಅಥವಾ ರಸ್ತೆ ಅಗಲೀಕರಣಗೊಳಿಸಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡುವಾಗ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನಗರದ ಬಹುತೇಕ ರಸ್ತೆಗಳು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಹಲವು ಕಡೆ ಫುಟ್‌ಪಾತ್ ನಿರ್ಮಿಸಿ ವಿದ್ಯುತ್‌ದೀಪಗಳನ್ನು ಅಳವಡಿಸಿದ್ದು, ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಈ ಫುಟ್‌ಪಾತ್‌ನಲ್ಲಿ ನೀರು ಸುಗಮವಾಗಿ ಹರಿದುಹೋಗಲು ಅಲ್ಲಲ್ಲಿ ರಂಧ್ರವನ್ನು ಕೊರೆದಿದ್ದರೂ ಮಣ್ಣು ಸೇರಿಕೊಂಡು ಮುಂದಕ್ಕೆ ಹೋಗಲು ಸಾಧ್ಯವಾಗದೆ ನೀರು ನಿಂತಲ್ಲೇ ನಿಲ್ಲುತ್ತಿದೆ. ಕುರಿಮಂಡಿ, ಎನ್.ಆರ್.ಮೊಹಲ್ಲಾದ ಹಲವು ಬಡಾವಣೆ, ಜೆ.ಪಿ.ನಗರದ ಹೊರವಲಯದ ನೂತನ ಬಡಾವಣೆಗಳಲ್ಲಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ತೊಂದರೆಯಾಗಿದೆ.
ಸಿಎಫ್‌ಟಿಆರ್‌ಐ ವಸತಿಗೃಹಕ್ಕೆ ಹೋಗುವ ಮಾರ್ಗವು ಜಲಾವೃತವಾಗುತ್ತಿದ್ದು, ರಸ್ತೆ ದಾಟಿ ವಸತಿಗೃಹಕ್ಕೆ ಹೋಗುವ ಮಾರ್ಗದಲ್ಲಿ ನೀರು ನಿಲ್ಲುತ್ತಿರುವುದರಿಂದ ಸಿಬ್ಬಂದಿ, ವಾಹನ ಓಡಾಡಲು ಹರಸಾಹಸಪಡುವಂತಾಗಿದೆ.
ತಿಂಗಳಲ್ಲೇ ಕಿತ್ತು ಬಂದ ಡಾಂಬರ್:
ಇತ್ತೀಚೆಗಷ್ಟೇ ಸಂಭ್ರಮದಿಂದ ನಾಡಹಬ್ಬ ಆಚರಿಸಿಕೊಂಡ ನಗರದಲ್ಲಿ ಹಾಕಲಾಗಿದ್ದ ಡಾಂಬರ್ ತಿಂಗಳು ಪೂರ್ಣಗೊಳ್ಳುವವರೆಗೆ ಹಲವು ಕಡೆ ಕಿತ್ತು ಬರುತ್ತಿದೆ. ದಸರಾ ಜಂಬೂ ಸವಾರಿಗೆ ಒಂದೆರಡು ದಿನಗಳು ಮಾತ್ರ ಇರುವಾಗ ರಾತ್ರೋರಾತ್ರಿ ತರಾತುರಿಯಲ್ಲಿ ಕೆಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿತ್ತು. ವಿಶ್ವ ಯೋಗ ದಿನಕ್ಕೆ ಪ್ರಧಾನಿ ನರೇಂದ್ರಮೋದಿ ಆಗಮಿಸಿದ್ದಾಗ, ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬಂದಾಗ ಕೂಡ ಕೆಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿತ್ತು.
ಆದರೆ, ಸತತವಾಗಿ ಸುರಿಯುತ್ತಿರುವ ಮಳೆ, ಕಳಪೆ ಕಾಮಗಾರಿಯಿಂದಾಗಿ ತೇಪೆ ಕಾರ್ಯ ಮಾಡಿದ್ದ ಜಲ್ಲಿ, ಡಾಂಬರು ಮೇಲೆದ್ದು, ರಸ್ತೆಗಳು ಮತ್ತೆ ಯಥಾಸ್ಥಿತಿಯ ಗುಂಡಿಗಳು ನಿರ್ಮಾಣವಾಗುತ್ತಿವೆ. ಬಯಲು ರಂಗಮಂದಿರದ ರಸ್ತೆ, ಅರಮನೆ ಸುತ್ತಮುತ್ತಲ ರಸ್ತೆ, ಅಗ್ರಹಾರ ಸೇರಿದಂತೆ ಇನ್ನಿತರ ರಸ್ತೆಗಳು ಗುಂಡಿ ಬಿದ್ದಿವೆ.
ಮಳೆ ನಿಂತ ತಕ್ಷಣ ಕಾಮಗಾರಿ
ದಸರಾ ಸಮಯದಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆಸಿರುವುದರಿಂದ ಕಳಪೆ ಎನ್ನುವ ದೂರಿದೆ. ಅಲ್ಲದೆ ಫುಟ್‌ಪಾತ್, ಮ್ಯಾನ್‌ಹೋಲ್ ಕೂಡ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲಲ್ಲಿ ಈಗ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಕಳಪೆ ಇರುವ ಕಡೆ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಳೆ ನಿಂತ ಬಳಿಕ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಮಳೆ ನೀರು ನಿಲ್ಲುವ ಕಡೆ ಮಾಹಿತಿ ಪಡೆದು ಸರಾಗವಾಗಿ ಸಾಗುವಂತೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
ಶಿವಕುಮಾರ್, ಮೇಯರ್