ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

mdg rainnn
ಮೂಡಿಗೆರೆ ತಾಲೂಕಿನ ಜನ್ನಾಪುರದಿಂದ ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿ ಮಳೆಯಿಂದ ಜಲಾವೃತವಾಗಿರುವುದು.
Published on

ಮೂಡಿಗೆರೆ: ತಾಲೂಕಿನಾದ್ಯಂತ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯೊಂದಿಗೆ ಗಾಳಿ ಹೆಚ್ಚಾಗಿರುವ ಕಾರಣ ಅಲ್ಲಲ್ಲಿ ಮರಗಳು ಬೀಳುತ್ತಿವೆ. ಕಾಫಿ ತೋಟದಲ್ಲಿ ವಿಪರೀತವಾಗಿ ಮರಗಳು ಬೀಳುತ್ತಿರುವುದರಿಂದ ಕಾರ್ಮಿಕರು ಮತ್ತು ರೈತರು ತೋಟದ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಸಾಧ್ಯವಾಗದೆ ಪಟ್ಟಣದ ಕಾಲೇಜುಗಳಲ್ಲಿ ಸೋಮವಾರ ಮತ್ತು ಮಂಗಳವಾರ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆಯಾಗಿತ್ತು. ಪಟ್ಟಣದಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಗೋಣಿಬೀಡು ಗ್ರಾಪಂ ಸದಸ್ಯೆ ಜುಬೇದಾ ಅವರ ಕಸ್ಕೇಬೈಲ್ ಗ್ರಾಮದಲ್ಲಿರುವ ಮನೆಯ ಕೊಠಡಿಯಲ್ಲಿ ನೈಸರ್ಗಿಕವಾದ ಜಲ ಉಕ್ಕಿ ಹರಿಯುತ್ತಿದೆ. ಇದರಿಂದ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಹಳೆಯ ಗೋಡೆಗಳು ಕುಸಿಯುವ ಸಾಧ್ಯತೆಯಿದೆ ಎಂದು ಜುಬೇದಾ ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮೂರು ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆಯಿಲ್ಲದೆ ಕುಡಿಯುವ ನೀರಿಗೆ ಮತ್ತು ವಿದ್ಯಾರ್ಥಿಗಳು ಓದಿಕೊಳ್ಳಲು ತೊಂದರೆ ಉಂಟಾಗಿದೆ. ಜನ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗ 4 ದಿನದಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಮರಗಳು ಉರುಳಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದಾಗಿದೆ.

ಜನ್ನಾಪುರ-ಸಕಲೇಶಪುರ ರಸ್ತೆಯಲ್ಲಿ ಸಂಚರಿಸಲಾರದಷ್ಟು ದೊಡ್ಡ ಪ್ರಮಾಣದಲ್ಲಿ ಗುಂಡಿಗಳಾಗಿವೆ. ಚರಂಡಿಯಿಲ್ಲದೆ ಮಳೆನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಜಲಾವೃತವಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಯಿತು. ಮೂಡಿಗೆರೆ ಪಟ್ಟಣದ ಕೆಎಂ ರಸ್ತೆ, ಹೆಸಗಲ್-ಚಿಕ್ಕಳ್ಳ ರಸ್ತೆ, ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಗೆಂಡೆಹಳ್ಳಿ ರಸ್ತೆ ಸೇರಿದಂತೆ ಪಟ್ಟಣದ ಕಾಂಕ್ರೀಟ್ ರಸ್ತೆಗಳು ಕೂಡ ಮಳೆಯಿಂದ ಗುಂಡಿಯಾಗಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೇಮಾವತಿ, ಜಪಾವತಿ ಸೇರಿದಂತೆ ಇತರ ನದಿಗಳು ಉಕ್ಕಿ ಹರಿಯುತ್ತಿವೆ. ಹೊಳೆಸಾಲಿನ ಗದ್ದೆಗಳು ಜಲಾವೃತವಾಗಿ ಭತ್ತ, ಶುಂಠಿ ಬೆಳೆ ನಾಶವಾಗಿವೆ. ಬಿಡುವಿಲ್ಲದೆ 3 ತಿಂಗಳು ನಿರಂತರವಾಗಿ ಮಳೆಯಾಗಿದ್ದರಿಂದ ಕಾಫಿ, ಕಾಳುಮೆಣಸಿನ ಬೆಳೆಗೆ ಕೊಳೆರೋಗ ಬಾಧಿಸಿದೆ. ಕಾಡಾನೆ ಕಾಟದಿಂದ ಬಾಳೆ ಬೆಳೆ ತಾಲೂಕಿನಲ್ಲಿ ಅರ್ಧದಷ್ಟು ನಾಶವಾಗಿತ್ತು. ಗಾಳಿ ಮಳೆಯಿಂದ ಬಾಳೆ ಸಂಪೂರ್ಣ ನೆಲಕಚ್ಚಿದೆ. ಗೌರಿ ಗಣೇಶ ಹಬ್ಬಕ್ಕೆ ಬಾಳೆ ಗೊನೆಯಿಲ್ಲದೆ ವ್ಯಾಪಾರಿಗಳು ಬಯಲುಸೀಮೆಯಿಂದ ಬಾಳೆಹಣ್ಣು ತರಲು ಮುಂದಾಗಿದ್ದಾರೆ. ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳ ತಂಡ ಇದುವರೆಗೂ ಭೇಟಿ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net