

ಕೊಡೇಕಲ್: ವಲಯದಲ್ಲಿ ಶನಿವಾರ ಬೆಳಗಿನಜಾವ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಹೊಲ ಮತ್ತು ಗದ್ದೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.
ಗ್ರಾಮದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆಯೊಂದು ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಭವಿಸಿಲ್ಲ. ಈ ವೇಳೆ ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಕೊಡೇಕಲ್‌ನಲ್ಲಿ 18.6, ನಾರಾಯಣಪುರ 20.2 ಮತ್ತು ಹುಣಸಗಿಯಲ್ಲಿ 101.2 ಮಿಮೀ ಮಳೆಯಾಗಿದೆ. ಈ ಮಳೆಯಿಂದ ಹಲವು ಗ್ರಾಮಗಳಲ್ಲಿ ಮನೆ ಕುಸಿದಿದ್ದು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
ಗೆದ್ದಲಮರಿ ಗ್ರಾಮದಲ್ಲಿ ಮಳೆಗೆ ಗ್ರಾಮದ ಎರಡೂ ಹಳ್ಳದ ಸೇತುವೆ ಸಂಪೂರ್ಣವಾಗಿ ಮುಳುಗಿ ಸಂಪರ್ಕ ಕಡಿತಗೊಂಡಿವೆ. ಇದರಿಂದಾಗಿ ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ರಜೆ ಹಾಕುವಂತಾಗಿದೆ. ಎರಡು ದಿನ ಹಿಂದೆ ನಾಟಿ ಮಾಡಿದ್ದ ಭತ್ತದ ಸಸಿಗಳು ಈ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಪದೇ ಪದೆ ಮಳೆಗಾಲದಲ್ಲಿ ಸೇತುವೆ ಮುಳುಗುತ್ತಿರುವುದರಿಂದ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ. ಸೇತುವೆ ಎತ್ತರ ಹೆಚ್ಚಿಸುವಂತೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.