ಧಾರಾಕಾರ ಮಳೆ: ಪ್ರವಾಹದಲ್ಲಿ ಮುಳುಗಿದ ಇರುವಕ್ಕಿ ಹೊಳೆ ಸೇತುವೆ

ANP RAIN WEB
Published on

ಆನಂದಪುರ: ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆವರೆಗೆ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ಎಲ್ಲ ಕೆರೆ, ಹಳ್ಳ, ಹೊಳೆಗಳು ಉಕ್ಕಿ ಹರಿದಿದೆ.

ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಇರುವಕ್ಕಿ ಗ್ರಾಮದ ಹೊಳೆಯಲ್ಲಿ ಅತ್ಯಧಿಕ ಪ್ರವಾಹದಿಂದ ಹೊಳೆಯ ಸೇತುವೆ ಮುಳುಗಿ ಹೋಗಿ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸೇತುವೆಯ ಎರಡೂ ಕಡೆ ರಸ್ತೆ ಕೊರಕಲು ಉಂಟಾಗಿ ಸಂಪೂರ್ಣ ರಸ್ತೆ ಕುಸಿಯುವ ಭೀತಿ ಉಂಟಾಗಿದೆ.

ಆಚಾಪುರ ಗ್ರಾಪಂ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದಲ್ಲಿ ಬೋರಪ್ಪ ಎಂಬುವರ ಮನೆ ಗೋಡೆ ಕುಸಿದು ಮನೆಯ ಅರ್ಧದಷ್ಟು ಛಾವಣಿ ನೆಲಕ್ಕೆ ಉರುಳಿ ಬಿದ್ದಿದೆ. ಸರಿರಾತ್ರಿ ಈ ಘಟನೆ ನಡೆದಿದ್ದು ಮನೆಯ ಜನರು ನಡು ಮನೆಯ ಹೊರ ಕೋಣೆಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಹೊಸೂರು ಗ್ರಾಪಂ ವ್ಯಾಪ್ತಿಯ ಹೊಸಗುಂದ ಕಾಲನಿ ಹಾಲಮ್ಮ ಅವರ ವಾಸದ ಮನೆ ಗೋಡೆ ಕುಸಿದು ಭಾಗಶಃ ಮನೆ ಕುಸಿದಿದೆ. ಜಂಬೂರಮನೆ ಗ್ರಾಮದ ಕೊಲ್ಲೂರಪ್ಪ ಎಂಬ ರೈತನ ಮೂರು ಎಕರೆ ವಿಸ್ತೀರ್ಣದ ಹೊಸದಾಗಿ ನಿರ್ಮಿಸಿದ ಅಡಕೆ ತೋಟಕ್ಕೆ ಕೆರೆ ತಗ್ಗಿನ ಹಳ್ಳದ ನೀರು ನುಗ್ಗಿ ಹಾನಿಯಾಗಿದೆ. ಒಂದು ವರ್ಷ ಪ್ರಾಯದ ಅಡಕೆ ಸಸಿ ಇದಾಗಿದ್ದು ಇಡೀ ತೋಟದ ಅಡಕೆ ಸಸಿಗಳು ಪ್ರವಾಹದ ರಭಸಕ್ಕೆ ಕಿತ್ತು ತೇಲಿ ಹೋಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net