ಧಾರವಾಡದಲ್ಲಿ ತೆರವು 7ರಿಂದ

Huda
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿರುವ ಅನಧಿಕೃತ, ಅಕ್ರಮ ಲೇಔಟ್​ಗಳ ವಿರುದ್ಧ ಸಮರ ಸಾರಿರುವ ನಗರಾಭಿವೃದ್ಧಿ ಪ್ರಾಧಿಕಾರ ಜುಲೈ 7ರಿಂದ ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಕಳೆದೊಂದು ವಾರದಿಂದ ಹುಬ್ಬಳ್ಳಿಯ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮ ಲೇಔಟ್​ಗಳನ್ನು ತೆರವು ಮಾಡಿದ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ನೇತೃತ್ವದ ತಂಡ, ಇದೀಗ ಧಾರವಾಡದತ್ತ ದೃಷ್ಟಿ ನೆಟ್ಟಿದೆ.

ಈಗಾಗಲೇ ಅವಳಿನಗರದಲ್ಲಿ ಸಮಾರು 57 ಅಕ್ರಮ ಲೇಔಟ್​ಗಳನ್ನು ಗುರುತು ಮಾಡಿರುವ ಹುಡಾ, ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಹುಬ್ಬಳ್ಳಿಯ ರಾಯನಾಳ, ಗಬ್ಬೂರ, ಮಂಟೂರ ರಸ್ತೆ ಸೇರಿ ವಿವಿಧ ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮ ಲೇಔಟ್​ಗಳನ್ನು ತೆರವು ಮಾಡಿದೆ.

ಅನಧಿಕೃತ ಲೇಔಟ್​ಗಳಲ್ಲಿ ನೆಡಲಾಗಿದ್ದ ಕಲ್ಲುಗಳನ್ನು ಕಿತ್ತೆಸೆಯಲಾಗಿದೆ. ಅಲ್ಲಿ ನಿರ್ವಿುಸಲಾಗಿದ್ದ ಗಟಾರು, ರಸ್ತೆ, ಕುಡಿಯುವ ನೀರಿನ ಪೈಪ್​ಲೈನ್ ಎಲ್ಲವನ್ನೂ ಧ್ವಂಸ ಮಾಡಲಾಗಿದೆ. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ಮಾಲೀಕರು ತಮ್ಮ ಅಕ್ರಮ ಲೇಔಟ್​ಗಳನ್ನು ಸಕ್ರಮ ಮಾಡಿಕೊಳ್ಳಲು ಸಮಯ ಕೇಳಿದ್ದರಿಂದ ಅವರಿಗೆ ಅವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಅವರು ದಾಖಲೆಗಳನ್ನು ಪೂರೈಸಿ ಸಕ್ರಮ ಮಾಡಿಕೊಳ್ಳದಿದ್ದರೆ ಅವುಗಳನ್ನು ಮತ್ತೆ ತೆರವು ಮಾಡುತ್ತೇವೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮುಲಾಜಿಲ್ಲದೇ ಕ್ರಮ:

ಅಕ್ರಮ, ಅನಧಿಕೃತ ಲೇಔಟ್ ನಿರ್ವಿುಸಿದವರು ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ತೆರವು ಮಾಡುತ್ತೇವೆ. ಒಂದು ವೇಳೆ ಅವರು ಸಕ್ರಮಕ್ಕೆ ಬಂದರೆ ಮಾಡಿ ಕೊಡಲು ಸಿದ್ಧ ಇದ್ದೇವೆ. ಸರ್ಕಾರಕ್ಕೆ ಯಾವುದೇ ತೆರಿಗೆ, ಶುಲ್ಕ ಕಟ್ಟದೇ ಅಕ್ರಮವಾಗಿ ಬಡಾವಣೆ ಮಾಡುತ್ತಾರೆ. ಅಂತಹ ಬಡಾವಣೆಗಳಲ್ಲಿ ಕೇವಲ ಬಾಂಡ್ ಪೇಪರ್​ನಲ್ಲಿ ಜನರಿಗೆ ಬರೆದು ಕೊಟ್ಟು ನಿವೇಶನಗಳನ್ನು ಮಾರಾಟ ಮಾಡುತ್ತಾರೆ. ಮುಗ್ಧ ಜನರು ಕಡಿಮೆ ಬೆಲೆಗೆ ಸಿಗುತ್ತಿದೆ ಎಂದುಕೊಂಡು ಕೊಳ್ಳುತ್ತಾರೆ. ಆದರೆ, ಆ ನಿವೇಶನಗಳು ನೋಂದಣಿಯಾಗಿರುವುದಿಲ್ಲ. ಮುಂದೆ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಜನರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಹುಡಾ ಕ್ರಮ ಕೈಗೊಳ್ಳುತ್ತಿದೆ ಎಂದು ಕಲ್ಬುರ್ಗಿ ತಿಳಿಸಿದರು.

ರಾಯನಾಳದಲ್ಲಿ ಒಬ್ಬ ಕೆರೆ ಜಾಗವನ್ನೂ ಅತಿಕ್ರಮಣ ಮಾಡಿಕೊಂಡು ಲೇಔಟ್ ಮಾಡಿದ್ದ. ಅವರಿಗೆ ಎಚ್ಚರಿಕೆ ನೀಡಿ ತೆರವು ಮಾಡುತ್ತೇವೆ. ಹುಡಾದಿಂದ ಗುರುತಿಸಲಾಗಿರುವ ಅಕ್ರಮ ಲೇಔಟ್​ಗಳ ಪೈಕಿ ಧಾರವಾಡದಲ್ಲೇ ಹೆಚ್ಚು ಇವೆ. ಹಾಗಾಗಿ ಮಂಗಳವಾರದಿಂದ ಅಲ್ಲಿಯೇ ಕಾರ್ಯಾಚರಣೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net