

ಹುಬ್ಬಳ್ಳಿ: ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ನಂತರ ಈ ಭಾಗದಲ್ಲಿ ಉದ್ಯಮ ಸ್ಥಾಪನೆಯ ಶುಕ್ರದೆಸೆ ಆರಂಭವಾಗಿದ್ದು, ಬೃಹತ್ ಕಂಪನಿಗಳು ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಮನಸ್ಸು ಮಾಡುತ್ತಿವೆ. ಅದರಲ್ಲೂ ಧಾರವಾಡ ಜಿಲ್ಲೆಗೆ ಹೆಚ್ಚಿನ ಕಂಪನಿಗಳ ಆಗಮನವಾಗುತ್ತಿದೆ.
ಫಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್ (ಎಫ್ಎಂಸಿಜಿ- ವೇಗವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳು) ಕ್ಲಸ್ಟರ್ ಸ್ಥಾಪನೆ ಕುರಿತ ವರದಿಯನ್ನು ಉಲ್ಲಾಸ ಕಾಮತ್ ನೇತೃತ್ವದ ವಿಜನ್ ಗ್ರುಪ್ ಈಚೆಗಷ್ಟೇ ಸರ್ಕಾರಕ್ಕೆ ಸಲ್ಲಿಸಿದ್ದು, ಇದೀಗ ಬೆಂಗಳೂರು ಮೂಲದ ಏಕಸ್ ಕಂಪನಿ ಧಾರವಾಡದಲ್ಲಿ ಗೃಹ ಬಳಕೆ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ, ಅಗತ್ಯ ಭೂಮಿ ಮಂಜೂರಿಯನ್ನೂ ಪಡೆದುಕೊಂಡಿದೆ.
ಧಾರವಾಡ ಬಳಿಯ ಇಟಿಗಟ್ಟಿಯಲ್ಲಿ ಅಂದಾಜು 400 ಎಕರೆ ಏಕಸ್ ಕಂಪನಿಗೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಕಂಪನಿ ಈ ದಿಸೆಯಲ್ಲಿ ಮೊದಲ ಹಂತದ ಚಟುವಟಿಕೆಗಳನ್ನು ಆರಂಭಿಸಿದೆ.
ಈಗಾಗಲೇ ಬೆಳಗಾವಿ ಬಳಿ ಏರೋಸ್ಪೇಸ್ ಎಸ್ಇಝೆಡ್ (ವಿಶೇಷ ಆರ್ಥಿಕ ವಲಯ) ಹೊಂದಿರುವ ಏಕಸ್ ಎಸ್ಇಝೆಡ್ ಪ್ರೖೆವೇಟ್ ಲಿಮಿಟೆಡ್ ಕಂಪನಿ ಧಾರವಾಡದ ಇಟಿಗಟ್ಟಿಯಲ್ಲಿ ಗೃಹ ಬಳಕೆ ವಸ್ತುಗಳ ಉತ್ಪಾದನಾ ಉದ್ಯಮಕ್ಕೆ ಅಂದಾಜು 3500 ಕೋಟಿ ರೂ. ಬಂಡವಾಳ ಹೂಡಲು ಮುಂದಾಗಿದೆ. ಈ ಮೂಲಕ ಅಂದಾಜು 30 ಸಾವಿರ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ.
ಇಲ್ಲಿ ಫ್ರಿಜ್, ವಾಷಿಂಗ್ ಮಷಿನ್, ಎಸಿ, ಹೀಟರ್, ಮಿಕ್ಸರ್, ಟಿವಿ ಮುಂತಾದ ಇಲೆಕ್ಟ್ರಾನಿಕ್ ಸರಕುಗಳ ಬಿಡಿ ಭಾಗಗಳನ್ನು ಉತ್ಪಾದಿಸಲಿದೆ. ಇದರಿಂದ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸುವ ಇರಾದೆ ಹೊಂದಿದೆ.
ಧಾರವಾಡ ಬಳಿಯ ಮುಮ್ಮಿಗಟ್ಟಿಯಲ್ಲಿ 500 ಎಕರೆ ಜಾಗವನ್ನು ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಈಗಾಗಲೇ ವಿಜನ್ ಗ್ರುಪ್ ವೀಕ್ಷಣೆ ಮಾಡಿದೆ. ಅಲ್ಲದೆ ಬೆಂಗಳೂರಿನಲ್ಲಿ ಸರ್ಕಾರಕ್ಕೆ ವರದಿ ಕೂಡ ನೀಡಿದೆ. ಹಾಗಾಗಿ ಶೀಘ್ರ ಘಟಕದ ಚಟುವಟಿಕೆಗಳು ಶುರುವಾಗುವ ಸಾಧ್ಯತೆ ಇದೆ.
ಇದರ ಜತೆಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡಿರುವಂತೆ ಮೈಕ್ರೋಫಿನಿಶ್ ವಾಲ್ವ್ ಕಂಪನಿ, ಇಲೆಕ್ಟ್ರಿಕಲ್ ವೆಹಿಕಲ್ ಕಂಪನಿ ಹಾಗೂ ಐಯಾನ್ಐಡಿಯಾ ಕಂಪ್ಯೂಟರ್ ಸಂಬಂಧಿತ ವಸ್ತುಗಳ ಉತ್ಪಾದನೆ ಸೇರಿ ನಾಲ್ಕು ಕಂಪನಿಗಳು ಘಟಕ ಸ್ಥಾಪನೆಗೆ ಮುಂದೆ ಬಂದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಅಲ್ಲದೆ, ಯಾದಗಿರಿಯಲ್ಲಿ ಫಾರ್ವಸಿಟಿಕಲ್ ಕ್ಲಸ್ಟರ್ ಆರಂಭಕ್ಕೆ ಕಳೆದ ತಿಂಗಳಷ್ಟೇ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಸತತ ಪ್ರಯತ್ನಗಳು ಒಂದೊಂದಾಗಿ ಫಲ ನೀಡುತ್ತಿವೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹಕಾರ ನೀಡುತ್ತಿದ್ದಾರೆ.
ಇಟಿಗಟ್ಟಿಯಲ್ಲಿ 600 ಎಕರೆ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅದರಲ್ಲಿ ಏಕಸ್ಗೆ 400 ಎಕರೆ ಕೊಡುವ ಬಗ್ಗೆ ಸರ್ಕಾರ ತೀರ್ವನಿಸಿದೆ. ಅದೇ ರೀತಿ ಮುಮ್ಮಿಗಟ್ಟಿ ಬಳಿ 500 ಎಕರೆಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಈಗಾಗಲೇ ವಿಜನ್ ಗ್ರುಪ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅತಿ ಶೀಘ್ರದಲ್ಲಿ ಮುಂದಿನ ಪ್ರಕ್ರಿಯೆಗಳು ಸರ್ಕಾರದ ಮಟ್ಟದಲ್ಲಿ ನಡೆಯಲಿವೆ.| ಮೋಹನ ಭರಮಕ್ಕನವರ, ಜಂಟಿ ನಿರ್ದೇಶಕ, ಡಿಐಸಿ ಧಾರವಾಡ
EndFragment