ಧಾರವಾಡಕರ ಕೊಡುಗೆ ಅಪಾರ

16 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಬಂಧ ಸಾಹಿತ್ಯಕ್ಕೆ ರಾ. ಯ. ಧಾರವಾಡಕರ ಕೊಡುಗೆ ಅಪಾರ. ಅವರ ಸಂಶೋಧನಾ ಪ್ರಬಂಧ ಹೊಸಗನ್ನಡ ಸಾಹಿತ್ಯದ ಉದಯಕಾಲ ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ.ಯ. ಧಾರವಾಡಕರ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ರಾ. ಯ. ಧಾರವಾಡಕರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದರು.
ಧಾರವಾಡಕರ 1860 ನಂತರದ ಸಾಹಿತ್ಯ ಚರಿತ್ರೆ ಇತಿಹಾಸವನ್ನು ನಿಖರವಾಗಿ ಗುರುತಿಸಿದ್ದಾರೆ. ಜತೆಗೆ ಅನೇಕ ಸಾಹಿತಿಗಳ ಕೃತಿಗಳನ್ನು ಪರಿಚಯಿಸಿದ್ದಾರೆ. ಕನ್ನಡ ನಾಡು, ನುಡಿಗೆ, ಭಾಷಾ ಬೆಳವಣಿಗೆಗೆ ಅನೇಕ ಸಂಘ, ಸಂಸ್ಥೆಗಳು ಶ್ರಮಿಸಿದ್ದು, ಅದರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ಯಾವ ರೀತಿಯದ್ದ ಎಂದು ಸ್ಪಷ್ಟವಾಗಿ ಈ ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು.
ಅಂದಿನ ಜನ ಕನ್ನಡ ನಾಡು, ನುಡಿಗೆ ಬದ್ಧತೆ ಹಾಗೂ ನಿಸ್ವಾರ್ಥ ಮನೋಭಾವನೆಯಿಂದ ಶ್ರಮಿಸಿದ್ದನ್ನು ಕೃತಿಯಲ್ಲಿ ಸ್ಮರಿಸಿದ್ದಾರೆ. ಅವರ ಬರವಣಿಗೆ ವಿಶಾಲವಾದ ಬುದ್ದಿಮತ್ತೆಯಿಂದ ಕೂಡಿದ್ದು, ಹಾಸ್ಯಮಯವಾದ ಭಾಷೆಯ ಬಳಕೆ, ಸಹೃದಯರ ಮನ ಗೆಲ್ಲುವಲ್ಲಿ ಯಶಸ್ವಿಯಾದದ್ದನ್ನು ಕಾಣುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ಒಂದು ಪುಣ್ಯ ಸ್ಥಳ. ರಾ. ಯ. ಧಾರವಾಡಕರ ಗಂಭೀರ ಸ್ವಭಾವದವರಾಗಿದ್ದರು. ಉತ್ತಮ ಆಡಳಿತಗಾರ ಸಹ. ಸರ್ಕಾರ ಹಾಗೂ ವಿವಿ ಮಟ್ಟದಲ್ಲಿ ಮಾತಿಗೆ ಗೌರವ ಹಾಗೂ ಮನ್ನಣೆ ಇರುತ್ತಿತ್ತು. ಇವರ ಕನ್ನಡ ಭಾಷಾಶಾಸ್ತ್ರ ಕೃತಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆೆ ಪಠ್ಯಪುಸ್ತಕವಾದದ್ದನ್ನು ಗಮನಿಸಿದರೆ ಅವರ ಬರವಣಿಗೆ ಮೌಲ್ಯದ ಅರಿವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಡಾ. ಧನವಂತ ಹಾಜವಗೋಳ, ಹರ್ಷ ಡಂಬಳ, ಎಸ್.ಬಿ. ಗುತ್ತಲ, ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೋಳ, ನವೀನಶಾಸ್ತ್ರಿ ಪುರಾಣಿಕ, ಡಾ. ಸುರೇಶ ಹೊರಕೇರಿ, ಪ್ರಕಾಶ ಮುಳಗುಂದ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net