ಧಾರವಾಡ-ಬೆಳಗಾವಿ ನೇರ ರೈಲಿಗೆ 335 ಹೆಕ್ಟೇರ್ ಭೂಮಿ

Train
Published on

ಹುಬ್ಬಳ್ಳಿ: ಧಾರವಾಡ-ಕಿತ್ತೂರ-ಬೆಳಗಾವಿ ನೂತನ ರೈಲು ಮಾರ್ಗ ನಿರ್ವಣಕ್ಕೆ ಸುಮಾರು 335 ಹೆಕ್ಟೇರ್ ಭೂಮಿ ಹಸ್ತಾಂತರಿ ಸುವಂತೆ ನೈಋತ್ಯ ರೈಲ್ವೆ ವಲಯ ಧಾರವಾಡ ಹಾಗೂ ಬೆಳಗಾವಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಸುಮಾರು 927.40 ಕೋಟಿ ರೂ. ವೆಚ್ಚದಲ್ಲಿ 73 ಕಿಮೀ ಉದ್ದದ ಈ ರೈಲು ಮಾರ್ಗ ಏಕಪಥ (ಸಿಂಗಲ್ ಲೈನ್)ದಲ್ಲಿ ನಿರ್ವಣಗೊಳ್ಳಲಿದೆ. ನೂತನ ಮಾರ್ಗ ನಿರ್ವಣಕ್ಕೆ ಈಗಾಗಲೇ ಟೆಂಡರ್ ಸಹ ಕರೆಯಲಾಗಿದ್ದು, ರೈಲ್ವೆ ಮಂಡಳಿ ಟೆಂಡರ್ ಅನ್ನು ಅಂತಿಮಗೊಳಿಸಲಿದೆ. ಭೂಮಿ ಹಸ್ತಾಂತರಗೊಂಡ ನಂತರದ 2 ವರ್ಷಗಳ ಒಳಗಾಗಿ ನೂತನ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ರೈಲ್ವೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದಾಗಿ ಈ ನೂತನ ಮಾರ್ಗದ ಯೋಜನೆಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿತ್ತು. ಈ ಮೊದಲು ಧಾರವಾಡದಿಂದ ಬೆಳಗಾವಿಗೆ ಲೋಂಡಾ ಮೂಲಕ 130 ಕಿ.ಮೀ. ರೈಲು ಪ್ರಯಾಣಕ್ಕೆ ಕನಿಷ್ಠ 3 ತಾಸು ಬೇಕಾಗುತ್ತಿತ್ತು. ಆದರೆ, ಕಿತ್ತೂರ ಮೂಲಕ ನಿರ್ವಣಗೊಳ್ಳುವ ಮಾರ್ಗದಿಂದಾಗಿ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಕೇವಲ 1 ತಾಸಿನಲ್ಲಿ ಧಾರವಾಡದಿಂದ ಬೆಳಗಾವಿಗೆ ಪ್ರಯಾಣಿಸಬಹುದು. ಈ ರೈಲು ಮಾರ್ಗ ನಿರ್ವಣಗೊಂಡ ನಂತರ ರಸ್ತೆ ಮೂಲಕ ಸಂಚರಿಸುವ 31 ಕಿಮೀ ಸಹ ಉಳಿತಾಯವಾಗಲಿದೆ. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಮಧ್ಯೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸಲು ಈ ಮಾರ್ಗ ಅನುಕೂಲವಾಗಿದೆ. ಇದರೊಂದಿಗೆ ಮೂರೂ ನಗರಗಳ ಮಧ್ಯೆ ತ್ವರಿತ ಸರಕು ಸಾಗಣೆಗೂ ಸಾಕಷ್ಟು ಸಹಾಯವಾಗಲಿದೆ. ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೇಗೂರ, ಕಿತ್ತೂರ, ಹುಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ-ಬಾಗೇವಾಡಿ, ಕಣವಿಕುರವಿನಕೊಪ್ಪ, ದೇಸೂರನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕಾಮಗಾರಿಯೂ ಇದೇ ವೇಳೆ ನಡೆಯಲಿದೆ.

ಬೆಳಗಾವಿ-ಧಾರವಾಡ ಮಧ್ಯೆ ಕಿತ್ತೂರ ಮೂಲಕ ನೂತನ ರೈಲು ಮಾರ್ಗಕ್ಕೆ ಅವಶ್ಯಕತೆ ಇರುವ ಭೂಮಿ ಗುರುತಿಸಲಾಗಿದೆ. ಭೂಮಿಯನ್ನು ಹಸ್ತಾಂತರಿಸುವಂತೆ ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸಲ್ಲಿಸುವುದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಈ ನೂತನ ಮಾರ್ಗ ನಿರ್ವಣಗೊಂಡಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ಪ್ರಯಾಣಿಸುವವರಿಗೆ ಹಾಗೂ ಇಲ್ಲಿನ ಕೈಗಾರಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ.| ಇ. ವಿಜಯಾ , ಮುಖ್ಯ ಪಿಆರ್​ಒ, ನೈಋತ್ಯ ರೈಲ್ವೆ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net