ಧಾರವಾಡ, ಬೆಳಗಾವಿ ಗಡಿಯಲ್ಲಿ ಬಿಗಿ

17 vikram 2
Published on

ಧಾರವಾಡ: ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಯಿಂದ ಧಾರವಾಡಕ್ಕೆ ಆಗಮಿಸುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಬೆಳಗಾವಿಯಿಂದ ಆಗಮಿಸುವ ಪ್ರತಿ ವಾಹನವನ್ನೂ ಚೆಕ್​ಪೋಸ್ಟ್​ನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕವೇ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ.

ನಗರದ ಬೈಪಾಸ್ ರಸ್ತೆಯ ತೇಗೂರ ಬಳಿ 2 ಚೆಕ್​ಪೋಸ್ಟ್ ತೆರೆಯಲಾಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಆಗಮಿಸುವ ವಾಹನಗಳನ್ನು ಧಾರವಾಡದ ಅಧಿಕಾರಿಗಳು ಹಾಗೂ ಧಾರವಾಡದಿಂದ ಬೆಳಗಾವಿಗೆ ತೆರಳುವ ವಾಹನಗಳನ್ನು ಬೆಳಗಾವಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇದಲ್ಲದೆ ಹಾರೋಬೆಳವಡಿ, ತಡಕೋಡ, ಕೃಷಿ ವಿಶ್ವ ವಿದ್ಯಾಲಯ, ಮುರುಘಾಮಠ ಸೇರಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಚೆಕ್​ಪೋಸ್ಟ್ ತೆರೆದು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಬೆಳಗಾವಿಯಿಂದ ಯಾವುದೋ ಕಾರಣಕ್ಕೆ ಆಗಮಿಸುವ ಜನರನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಆದರೆ, ಅಗತ್ಯ ಸೇವೆಗಳ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ವರ್ಗದವರೂ ಆ ಜಿಲ್ಲೆಯಿಂದ ಬರುತ್ತಾರೆ. ಅವರಿಂದ ಕೂಡ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲೆ ಇದೆ.

ಅಗತ್ಯ ಸೇವೆ ನೀಡುವ ಇಲಾಖೆಗಳ ಸಿಬ್ಬಂದಿಗೆ ಓಡಾಡಲು ಸರ್ಕಾರ ಅನುಮತಿ ನೀಡಿದೆ. ಈ ರೀತಿ ಧಾರವಾಡದಿಂದ ಬೆಳಗಾವಿಗೆ ನಿತ್ಯವೂ ನೂರಾರು ಜನ ತೆರಳುತ್ತಾರೆ. ಅವರು ಯಾವ ಪ್ರದೇಶಕ್ಕೆ ಹೋಗುತ್ತಾರೆ, ಎಂಥವರಿಗೆ ಸೇವೆ ನೀಡುತ್ತಾರೆ ಎಂಬ ಪೂರ್ಣ ಮಾಹಿತಿ ಜಿಲ್ಲಾಡಳಿತದ ಬಳಿ ಇಲ್ಲ. ಒಂದು ವೇಳೆ ಅವರು ಸೋಂಕಿತರು/ಸೋಂಕಿತರ ಸಂಪರ್ಕಕ್ಕೆ ಒಳಗಾದವರೊಂದಿಗೆ ವ್ಯವಹಾರ ನಡೆಸಿದರೆ... ಎಂಬ ಆತಂಕವೂ ಇದೆ.

ಇದೇ ಕಾರಣಕ್ಕಾಗಿ ಧಾರವಾಡದಿಂದ ಬೆಳಗಾವಿಗೆ ತೆರಳುವ ಸಿಬ್ಬಂದಿಗೆ ಅಲ್ಲೇ ಉಳಿದು ಸೇವೆ ಸಲ್ಲಿಸುವಂತೆ ಸಲಹೆ ಮಾಡುವ ಚಿಂತನೆ ನಡೆದಿದೆ. ಆದರೆ, ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಸೋಂಕಿತರ ಪ್ರಕರಣ ಹೆಚ್ಚಿದ್ದರಿಂದ ಅಲ್ಲೇ ಉಳಿದುಕೊಳ್ಳಲು ಬಹುತೇಕರು ಸಿದ್ಧರಾಗುವುದು ಕಷ್ಟ ಎನ್ನಲಾಗಿದೆ.

ಸರ್ಕಾರಿ ನೌಕರರು ಮತ್ತು ಅಗತ್ಯ ಸೇವೆ ನೀಡುವ ಇತರರು ಸೇರಿ ನಿತ್ಯವೂ ಪಕ್ಕದ ಜಿಲ್ಲೆಗೆ ಹೋಗಿ ಬರುವವರ ಖಚಿತ ಸಂಖ್ಯೆ ತಿಳಿದಿಲ್ಲ. ಅವರು ಅಲ್ಲೇ ಉಳಿದು ಸೇವೆ ಸಲ್ಲಿಸುವಂತೆ ಮಾಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಲಾಗುವುದು.| ಸಂತೋಷ ಬಿರಾದಾರ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net