ಧಾರವಾಡ, ಬೆಳಗಾವಿ ಗಡಿಯಲ್ಲಿ ಬಿಗಿ ಭದ್ರತೆ

10 vikram 5A
Published on

ಧಾರವಾಡ: ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಗಡಿ ಮಧ್ಯೆ ಭಾರಿ ಭದ್ರತೆ ಒದಗಿಸಲಾಗಿದ್ದು, ಸುಖಾಸುಮ್ಮನೆ ಬೈಕ್ ಮೇಲೆ ಓಡಾಡುವವರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡುತ್ತಿದ್ದಾರೆ.

ಧಾರವಾಡದಿಂದ ಸುಮಾರು 25 ಕಿ.ಮೀ. ದೂರದ ಗಡಿ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದು, ಬೆಳಗಾವಿಯಿಂದ ಆಗಮಿಸುವ ಪ್ರತಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಗಡಿ ಭಾಗದಲ್ಲಿ ನಿರ್ವಿುಸಿರುವ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಡೆದು ಅವರ ಸಂಪೂರ್ಣ ಮಾಹಿತಿ ಪಡೆಯುವುದಲ್ಲದೆ, ಥರ್ಮಲ್ ಸ್ಕ್ರೀನಿಂಗ್ ಸಹ ಮಾಡುತ್ತಿದ್ದಾರೆ.

ಈ ಮಧ್ಯೆ ಕಿತ್ತೂರಿನ ಇಬ್ಬರು ಯುವಕರು ಬೈಕ್ ಮೇಲೆ ಧಾರವಾಡ ಕಡೆ ಹೋಗುವುದು ಬರುವುದು ಮಾಡುತ್ತಿದ್ದರು. ಕೇಳಿದರೆ ತಮ್ಮ ಜಮೀನಿಗೆ ಹೋಗಿ ಬರುತ್ತಿರುವುದಾಗಿ ಹೇಳುತ್ತಿದ್ದರು. ಕೊನೆಗೆ ಅವರನ್ನು ತಡೆದು ನಿಲ್ಲಿಸಿದ ಪೊಲೀಸರು, ಮಾಸ್ಕ್ ಹಾಗೂ ಹೆಲ್ಮೆಟ್ ಇಲ್ಲದ ಕಾರಣಕ್ಕೆ ಇಬ್ಬರಿಗೂ ಕೆಲ ಹೊತ್ತು ಬಸ್ಕಿ ಹೊಡೆಸಿ, ಪುನಃ ಓಡಾಡಿದ್ರೆ ಸುಮ್ಮನೆ ಬಿಡುವುದಿಲ್ಲ ಎಂದು ಗಂಭೀರ ಎಚ್ಚರಿಕೆ ನೀಡಿ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net