

ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ಸಾರ್ವಜನಿಕರಿಗೆ ಸ್ಥಳೀಯವಾಗಿ ಲಭ್ಯವಿದ್ದು, ಪ್ರವಾಹ, ಮಳೆಹಾನಿ ಸಂಭವಿಸಿದಲ್ಲಿ ತಕ್ಷಣ ಸ್ಪಂದಿಸಿ ನೆರವಾಗಬೇಕು. ವಿಳಂಬವಿಲ್ಲದೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.
ಪ್ರವಾಹ, ಮಳೆಹಾನಿ ತಡೆಗೆ ಕೈಗೊಂಡ ಪೂರ್ವಸಿದ್ಧ್ದೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಶನಿವಾರ ಜರುಗಿದ ಸಂವಾದದ ನಂತರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾದರೆ 8 ತಾಲೂಕುಗಳ 78 ಗ್ರಾಮಗಳು ಸಂಭವನೀಯ ಪ್ರವಾಹಕ್ಕೆ ಒಳಗಾಗಬಹುದು ಎಂದು ಗುರುತಿಸಲಾಗಿದೆ. ಅಂಥ ಗ್ರಾಮಗಳಿಗೆ ಒಬ್ಬ ನೋಡಲ್ ಅಧಿಕಾರಿ ಎಂದು ನೇಮಿಸಲಾಗಿದೆ. ನೋಡಲ್ ಅಧಿಕಾರಿ, ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ಅಗತ್ಯವಿದ್ದಲ್ಲಿ ಸಮೀಪದ ಶಾಲೆ, ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಶೌಚಗೃಹದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಕಾಳಜಿ ಕೇಂದ್ರಗಳಿಗಾಗಿ ಸುಮಾರು 2,200 ಬೆಡ್ ಮತ್ತು ಕಾಟ್ಗಳಲ್ಲಿ ಕೆಲವು ಖಾಲಿ ಇವೆ. ಅವುಗಳನ್ನು ಕಾಳಜಿ ಕೇಂದ್ರಗಳಲ್ಲಿ ಬಳಸಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಮಹಾನಗರ ವ್ಯಾಪ್ತಿಯಲ್ಲಿ ಮ್ಯಾನ್ಹೋಲ್ಗಳ ಸಮೀಕ್ಷೆ ಮಾಡಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿ, ನಾಲಾ ಮತ್ತು ರಾಜಕಾಲುವೆಗಳನ್ನು ಸ್ವಚ್ಛವಾಗಿಡಬೇಕು. ನೆರೆ ಪ್ರದೇಶಗಳನ್ನು ಗುರುತಿಸಬೇಕು. ಅಗತ್ಯವಿದ್ದರೆ ಕೇಂದ್ರ ತೆರಯಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ಜಿಪಂ ಸಿಇಒ ಡಾ. ಬಿ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೃಷ್ಣಕಾಂತ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ವಿಭಾಗಾಕಾರಿ ಡಾ. ಗೋಪಾಲಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ತಹಸೀಲ್ದಾರರು, ಉಪಸ್ಥಿತರಿದ್ದರು.
ಪ್ರವಾಹ ಸಂಭವನೀಯ ಗ್ರಾಮಗಳು
ಧಾರವಾಡ ತಾಲೂಕಿನ 9, ಅಳ್ನಾವರ ತಾಲೂಕಿನ 3, ಹುಬ್ಬಳ್ಳಿ ತಾಲೂಕಿನ 13, ಹುಬ್ಬಳ್ಳಿ ನಗರ ತಾಲೂಕಿನ 4, ಕಲಘಟಗಿ ತಾಲೂಕಿನ 5, ನವಲಗುಂದ ತಾಲೂಕಿನ 26, ಅಣ್ಣಿಗೇರಿ ತಾಲೂಕಿನ 1, ಕುಂದಗೋಳ ತಾಲೂಕಿನ 17 ಸೇರಿ 78 ಗ್ರಾಮಗಳು ಅತಿವೃಷ್ಟಿಯಿಂದ ಹಾನಿಗೊಳಪಡುವ ಗ್ರಾಮಗಳೆಂದು ಗುರುತಿಸಲಾಗಿದೆ.
124 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಜೂ. 1ರಿಂದ 18ರವರೆಗೆ ಧಾರವಾಡ ತಾಲೂಕಿನಲ್ಲಿ 22, ಅಳ್ನಾವರ 1, ಹುಬ್ಬಳ್ಳಿ 14, ಹುಬ್ಬಳ್ಳಿ ನಗರ 5, ಕಲಘಟಗಿ 10, ಕುಂದಗೋಳ 13, ಅಣ್ಣಿಗೇರಿ 17, ನವಲಗುಂದ 42 ಸೇರಿ 124 ಮನೆಗಳು ಭಾಗಶಃ ಹಾನಿಯಾಗಿವೆ. ನವಲಗುಂದದಲ್ಲಿ 3 ಜಾನುವಾರುಗಳ ಪ್ರಾಣಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.