ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ

4 vikram 6
Published on

ಧಾರವಾಡ: ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ 17 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಅವಶ್ಯತೆ ಇತ್ತು. ಆದರೆ 7 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಬಂದಿದೆ. ಈಗಾಗಲೇ 17 ಸಾವಿರ ಮೆಟ್ರಿಕ್ ಟನ್ ಗೊಬ್ಬರ ವಿತರಿಸಿದ್ದು, ಇನ್ನೂ 9 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಪೂರೈಸುವಂತೆ ಕೇಂದ್ರ ಸಚಿವ ಸದಾನಂದಗೌಡ ಹಾಗೂ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ರೈತರು ವಿಚಲಿತರಾಗುವುದು ಬೇಡ ಎಂದರು.

ಕರೊನಾ ವಿಷಯವಾಗಿ ಮಾತನಾಡಿದ ಶೆಟ್ಟರ್, ಜಿಲ್ಲೆಗೆ 165 ವೆಂಟಿಲೇಟರ್​ಗಳು ಬಂದಿವೆ. ಕಿಮ್ಸ್​ನಲ್ಲಿ ಇನ್ನೂ 250 ಬೆಡ್ ಹಾಗೂ ಐಸಿಯು ವ್ಯವಸ್ಥೆಗೆ ಸೂಚಿಸಲಾಗಿದೆ. ಈ ಕೆಲಸ 2 ದಿನಗಳಲ್ಲಿ ಆಗಲಿದೆ. ಖಾಸಗಿ ಆಸ್ಪತ್ರೆಯವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕಿಮ್ಸ್​ನಲ್ಲಿ ಇನ್ನೂ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಿದರೆ ಸಿಬ್ಬಂದಿ ಒತ್ತಡಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಯವರಿಗೆ ಇನ್ನೂ ಹೆಚ್ಚಿನ ಬೆಡ್ ನೀಡಲು ಮನವಿ ಮಾಡಲಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಅಂಗಡಿ ಸಿಬ್ಬಂದಿಗೆ ಪಾಸಿಟಿವ್ ಬಂದರೆ ಅಂಗಡಿಯನ್ನು 48 ಗಂಟೆ ಮಾತ್ರ ಬಂದ್ ಮಾಡಲಾಗುವುದು. ಅಲ್ಲಿ ಸರ್ಕಾರದಿಂದ ಒಂದು ಫಲಕ ಮಾತ್ರ ಅಳವಡಿಸಲಾಗುವುದು. ಹೀಗಾಗಿ ವ್ಯಾಪಾರಸ್ಥರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಈವರೆಗೆ ಸೋಂಕು ತಗುಲಿದವರಲ್ಲಿ ಶೇ. 50ರಷ್ಟು ಜನ ಗುಣವಾಗಿದ್ದಾರೆ ಎಂಬುದು ಸಮಾಧಾನದ ಸಂಗತಿ. ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಕರೊನಾ ವಿಷಯದಲ್ಲಿ ಲೋಪದೋಷಗಳಾಗದಂತೆ ಸೂಚನೆ ನೀಡಲಾಗಿದೆ. ಟಾಟಾ ಮಾಕೋಪೋಲೋ ಕಂಪನಿ 10 ದಿನ ಬಂದ್ ಆಗಿದ್ದು, ನಂತರ ಮತ್ತೆ ಕಾರ್ಯಾರಂಭ ಮಾಡಲಿದೆ. ಪೊಲೀಸ್ ವಸತಿ ಕೇಂದ್ರದಲ್ಲೂ ತಾತ್ಕಾಲಿಕವಾಗಿ ತರಬೇತಿ ಬಂದ್ ಮಾಡುವಂತೆ ಸೂಚಿಸಲಾಗಿದೆ ಎಂದರು.

ಕಾಂಗ್ರೆಸ್​ನವರಿಗೆ ಮಾತನಾಡಲು ಬೇರೆ ವಿಷಯವಿಲ್ಲ
ಹುಬ್ಬಳ್ಳಿ:
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ದಿಗ್ವಿಜಯ ಸಿಂಗ್ ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹಾಗಾಗಿಯೇ ರಾಮಮಂದಿರ ಶಿಲಾನ್ಯಾಸಕ್ಕೆ ನಿಗದಿಯಾಗಿರುವ ಮುಹೂರ್ತದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕುಟುಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ 370ನೇ ವಿಧಿ ಜಾರಿ, ಜಿಎಸ್​ಟಿ ಅನುಷ್ಠಾನ, ರಾಮ ಮಂದಿರ ನಿರ್ಮಾಣ ಕಾರ್ಯ... ಹೀಗೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಹತಾಶರಾಗಿರುವ ಕಾಂಗ್ರೆಸ್ಸಿಗರು ಸಲ್ಲದ ವಿಷಯಗಳನ್ನು ಹುಡುಕುತ್ತಿದ್ದಾರೆ. ಅವರೆಲ್ಲ ಮೊದಲು ಹಿಂದು ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಕೀಳಾಗಿ ಮಾತಾಡಿದವರು. ಈಗ ಮುಹೂರ್ತದ ಬಗ್ಗೆ ಸಲೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಡಳಿತದ ಮೇಲೆ ದುಷ್ಪರಿಣಾಮವಿಲ್ಲ: ಕೋವಿಡ್ ಸೋಂಕಿನಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾದರೂ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಸಿಎಂ ಕ್ವಾರಂಟೈನ್​ನಲ್ಲಿದ್ದರೂ ಮುಖ್ಯಕಾರ್ಯದರ್ಶಿ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net