ಧಾರವಾಡ ಜಿಲ್ಲೆಯಲ್ಲಿ ಮಳೆ ಅವಾಂತರ, ಮನೆ, ಅಪಾರ್ಟಮೆಂಟ್​ಗಳಿಗೆ ನುಗ್ಗಿದ ನೀರು

h11-Rain Conventional hall 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ವ್ಯಾಪಕ ಹಾನಿ ತಂದೊಡ್ಡಿದೆ. ಎಲ್ಲೆಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಷ್ಟೊತ್ತಿಗೆ ಬಿತ್ತನೆ ಪೂರ್ಣಗೊಳ್ಳಬೇಕಿದ್ದ ಹಿಂಗಾರು ಹಂಗಾಮು ಆರಂಭವೇ ಕೆಲ ವಾರ ಮುಂದೆ ಹೋಗುವ ಆತಂಕ ಎದುರಾಗಿದೆ.

ನಗರ ಪ್ರದೇಶದಲ್ಲಿ ಅನೇಕ ಮನೆ ಹಾಗೂ ಅಪಾರ್ಟಮೆಂಟ್​ಗಳಿಗೆ ನೀರು ಹಾಗೂ ಕೊಳಚೆ ನುಗ್ಗಿದೆ. ಬಡಾವಣೆಗಳು ನೀರಲ್ಲಿ ನಿಂತಿವೆ. ಕೆಲವೆಡೆ ರಾತ್ರಿಯಿಡಿ ಮನೆಯಿಂದ ನೀರು ಹೊರಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದರು.

ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ಹಿಂಗಾರು ಬಿತ್ತನೆ ಆರಂಭವಾಗುತ್ತಿದ್ದವು. ಸೀಗೆ ಹುಣ್ಣಿಮೆಯಂದು ಮೊಳಕೆಯೊಡೆದ ಬೆಳೆಗಳ ಮಧ್ಯೆ ನಿಂತು ರೈತರು ಭೂತಾಯಿಗೆ ಚರಗದ ನೈವೇದ್ಯ ಸಲ್ಲಿಸುತ್ತಿದ್ದರು. ಆದರೆ, ಈ ವರ್ಷ ಮಳೆ ಅತಿಯಾಗಿ ಬಿತ್ತನೆಗೆ ಹದ ಸಿಗುತ್ತಿಲ್ಲ.

ಈಗ ಮಳೆ ನಿಂತರೂ ಜಮೀನು ಸ್ವಚ್ಛ ಮಾಡಲು 15-20 ದಿನಗಳು ಬೇಕಾಗುತ್ತದೆ. ಇನ್ನೂ ನಾಲ್ಕೈದು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಅಕ್ಟೋಬರ್ ಇಡೀ ತಿಂಗಳು ಮಳೆ ಇರುವುದರಿಂದ ಬಿತ್ತನೆ ದೂರ ಹೋಗಲಿದೆ. ಹಿಂಗಾರಿ ಬೆಳೆಗಳ ಮೇಲೆ ಹವಾಮಾನ ವೈಪರೀತ್ಯ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ.

ಮುಂಗಾರು ಹಂಗಾಮಿನ ಬೆಳೆಗಳಾದ ಸೋಯಾಬಿನ್ ಕಿತ್ತು ಹೊಲದಲ್ಲಿ ರಾಶಿ ಹಾಕಲಾಗಿದ್ದು, ಜಡಿ ಮಳೆಯಿಂದ ಸೋಯಾಬಿನ್ ಬಣವೆಗಳಿಗೆ ಹಲವೆಡೆ ಹಾನಿಯಾಗಿದೆ. ಹುಬ್ಬಳ್ಳಿ, ಕೋಳಿವಾಡ, ಶಿರಗುಪ್ಪಿ ಮುಂತಾದ ಕಡೆಗಳಲ್ಲಿ ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತಿವೆ.

ನವಲಗುಂದ ತಾಲೂಕಿನ ಮೊರಬ ಹೋಬಳಿ ವ್ಯಾಪ್ತಿಯಲ್ಲಿ ಜಮೀನುಗಳು ಜಲಾವೃತಗೊಂಡಿವೆ. ಮನೆಗಳಿಗೂ ಹಾನಿಯಾಗಿದೆ.

ಬೆಣ್ಣಿಹಳ್ಳ, ತುಪ್ಪರಿಹಳ್ಳ ತುಂಬಿ ಹರಿದಿವೆ. ಅಳಗವಾಡಿ ಹತ್ತಿರ ಪಂಪ್ ಹೌಸ್​ನಲ್ಲಿ ಸಿಲುಕಿಕೊಂಡ ರೈತ ಸೋಮಪ್ಪ ರಂಗಣ್ಣವರ ಅವರನ್ನು ಅಗ್ನಿಶಾಮಕ ದಳದವರು ಕಾಪಾಡಿದ್ದಾರೆ. ರೈತರ ಪಂಪ್​ಸೆಟ್​ಗಳು, ಪೈಪ್​ಗಳು, ಕೃಷಿ ಸಲಕರಣೆಗಳು ಕೊಚ್ಚಿಹೋಗಿವೆ.

ತುಪ್ಪರಿಹಳ್ಳ ಪ್ರವಾಹದಿಂದ ಮೊರಬ-ಗುಮ್ಮಗೋಳ ರಸ್ತೆ ಹಾಗೂ ಶಿರಕೋಳ-ಹಣಸಿ, ಬಳ್ಳೂರ- ಜಾವೂರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net