

ಧಾರವಾಡ: ಕರೊನಾ ಹಾವಳಿ ಮಧ್ಯೆಯೂ ಮುಂಜಾಗ್ರತಾ ಕ್ರಮಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆ ಬಿ ಗ್ರೇಡ್ ಪಡೆಯುವ ಮೂಲಕ 27ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಜಿಲ್ಲೆಗಳಿಗೆ ಅಂಕಗಳಲ್ಲಿ ಫಲಿತಾಂಶ ನೀಡುವ ಬದಲು ಗ್ರೇಡ್ ನೀಡಿದ್ದು, ಜಿಲ್ಲೆಗೆ ಬಿ ಗ್ರೇಡ್ ದೊರೆತಿದೆ. ಕಳೆದ ಬಾರಿ ರಾಜ್ಯದ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಒಂದು ಸ್ಥಾನ ಮೇಲೇರಿದೆ. ತಾಲೂಕುವಾರು ಫಲಿತಾಂಶ ಗಮನಿಸಿದರೆ, ಕುಂದಗೋಳ ಹಾಗೂ ಧಾರವಾಡ ಗ್ರಾಮೀಣ ಸಿ ಗ್ರೇಡ್ ಪಡೆದಿದ್ದರೆ, ಉಳಿದ ತಾಲೂಕುಗಳು ಬಿ ಗ್ರೇಡ್ ಪಡೆದಿವೆ.
ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಜಿಲ್ಲೆ ಎ ದರ್ಜೆ ಪಡೆಯದಿರುವುದು ಬೇಸರದ ಸಂಗತಿ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625 ಅಂಕಗಳಿಗೆ 620 ಅಂಕಗಳನ್ನು ಪಡೆದಿರುವ ಧಾರವಾಡ ಬಾಲಬಳಗ ಸೃಜನಶೀಲ ಶಾಲೆಯ ಆದಿತ್ಯ ಮಹೇಶ ಭಟ್ ಹಾಗೂ ಹುಬ್ಬಳ್ಳಿ ಚೇತನ ಪಬ್ಲಿಕ್ ಶಾಲೆಯ ಅನನ್ಯಾ ಕಡಕೋಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
619 ಅಂಕಗಳನ್ನು ಪಡೆದ ಮಾಳಮಡ್ಡಿಯ ಕೆ.ಇ. ಬೋರ್ಡ್ ಶಾಲೆಯ ಅಂಕಿತ ಪಾಟೀಲ, ಚೇತನ ಪಬ್ಲಿಕ್ ಶಾಲೆಯ ವಿನೀತ್ ಹಿರೇಮನಿ, ಹುಬ್ಬಳ್ಳಿ ಸೇಂಟ್ ಆಂಡ್ರೀವ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಫಿಯಾ ಅಂಜೀನ್, ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯ ಓಂಕಾರ ರಾಜೀವ್ ಪ್ರಭು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹುಬ್ಬಳ್ಳಿಯ ಸೇಂಟ್ ಮೇರಿಸ್ ಹೈಸ್ಕೂಲ್ನ ಆಶಿಸ್ ಲೋದ್ಯಾ, ಎಸ್ಬಿಐ ಅಧಿಕಾರಿಗಳ ಸಂಘದ ಆಂಗ್ಲ ಮಾಧ್ಯಮ ಶಾಲೆಯ ರಾಹುಲ್ ಭೀಮಾಕರಿ, ಧಾರವಾಡ ಪವನ ಆಂಗ್ಲ ಮಾಧ್ಯಮ ಶಾಲೆಯ ಎಸ್. ಧರಣಿ, ಶ್ರೀಮತಿ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯರಾದ ದಿಯಾ ಹೊನ್ನಿ ಹಾಗೂ ಪ್ರಣವ ಕುಲಕರ್ಣಿ 618 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳ ಪೈಕಿ ಕುಂದಗೋಳ ತಾಲೂಕು ಹಿರೇಹರಕುಣಿಯ ರೇಖಾ ಸಿದ್ದಲಿಂಗಯ್ಯ ಗುರಯ್ಯನವರ 613 ಅಂಕ ಪಡೆದು ಪ್ರಥಮ, ಹುಬ್ಬಳ್ಳಿಯ ಸಿದ್ಧಾರೂಢ ನಗರದ ಮುರಾರ್ಜಿ ಶಾಲೆಯ ಸೃಷ್ಟಿ ಸೊಗಲದ 611 ಅಂಕ ಪಡೆದು ದ್ವಿತೀಯ ಹಾಗೂ ಧಾರವಾಡದ ಆರ್.ಎನ್. ಶೆಟ್ಟಿ ಮೈದಾನದಲ್ಲಿನ ಆದರ್ಶ ಶಾಲೆಯ ತೇಜಸ್ವಿನಿ ಜ್ಯೋತೆಪ್ಪನವರ ತೃತೀಯ ಸ್ಥಾನ ಪಡೆದಿದ್ದಾರೆ.
ಕಳೆದ ಬಾರಿ ಜಿಲ್ಲೆಯು ಫಲಿತಾಂಶದಲ್ಲಿ ಶೇ. 82.21ರಷ್ಟು ಸಾಧನೆ ಮಾಡಿದ್ದರೂ ರಾಜ್ಯದಲ್ಲಿ 28ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ತುಂಬ ಎಚ್ಚರಿಕೆಯಿಂದ ನಡೆಸಿದ್ದು, ಬಿ ಗ್ರೇಡ್ ಪಡೆಯುವ ಮೂಲಕ ತುಸು ಸಮಾಧಾನ ತಂದಿದೆ ಎಂದು ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.
ಆಫಿಫಾ ಜಿಲ್ಲೆಗೆ ಎರಡನೇ ರ್ಯಾಂಕ್
ಹುಬ್ಬಳ್ಳಿ: ಸೇಂಟ್ ಆಂಡ್ರಿವ್ಸ್ ಎಜುಕೇಷನ್ ಸೊಸೈಟಿಯ ಸೇಂಟ್ ಆಂಡ್ರಿವ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಫಿಫಾ ಎ. ಬೆಂಗಳೂರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ರ್ಯಾಂಕ್ ಪಡೆದಿರುವುದಾಗಿ ಮುಖ್ಯಾಧ್ಯಾಪಕರು ತಿಳಿಸಿದ್ದಾರೆ.
619 (ಶೇ. 99.04) ಅಂಕ ಪಡೆದಿದ್ದು, ವಿಜ್ಞಾನ, ಕನ್ನಡ, ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ. ಚೀಕಟ್ಟಿ ಸುಷ್ಮಾ ಶೇ. 94.08 ಅಂಕ ಪಡೆದು ಶಾಲೆಗೆ ಎರಡನೇ ಸ್ಥಾನ ಪಡೆದಿದ್ದಾಳೆ. ಚೇರ್ಮನ್ ಆಲಿವರ್ ಐಮನ್, ಶಿಕ್ಷಕರ ಖುಷಿ ವ್ಯಕ್ತಪಡಿಸಿದ್ದಾರೆ.