ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

h24-saahitya sammelana 2
Published on

ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ 2ದಿನಗಳ ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಪ್ರೊ. ಧರಣೇಂದ್ರ ಕುರಕುರಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ರಮಾಕಾಂತ ಜೋಶಿ, ಪ್ರೊ. ಧರಣೇಂದ್ರ ಕುರಕುರಿ ಅವರಿಗೆ ಪರಿಷತ್ ಧ್ವಜ ಹಸ್ತಾಂತರಿಸಿದರು. ಸಮ್ಮೇಳನದ ನಿಮಿತ್ತ ಹೊರ ತಂದ ‘ಉಸಿರಾಗಲಿ ಕನ್ನಡ’ ಸ್ಮರಣ ಸಂಚಿಕೆಯನ್ನು ಮಾಜಿ ಸಂಸದ ಐ.ಜಿ. ಸನದಿ ಲೋಕಾರ್ಪಣೆಗೊಳಿಸಿದರು.

ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಬಿ. ಜವಳಿ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿ.ಎನ್. ವಾಸರೆ, ರಾಜೇಂದ್ರ ಬಿಳಗಿ, ಬಿ.ಎ. ಪಾಟೀಲ, ವಿಮಲ ತಾಳಿಕೋಟಿ, ಎಸ್.ಕೆ. ಆದಪ್ಪನವರ, ಶಶಿ ಸಾಲಿ, ಜೀನದತ್ತ ಹಡಗಲಿ, ಇತರರು ಇದ್ದರು. ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕೆ.ಎಸ್. ಕೌಜಲಗಿ ನಿರೂಪಿಸಿದರು. ಎಸ್​ಜೆಎಂವಿ ಸಂಘದ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಗುರುವಾರ ಜಿನೈಕ್ಯರಾದ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಇದಕ್ಕೂ ಮೊದಲು ಕಿಮ್್ಸ ನಿರ್ದೇಶ ಡಾ. ರಾಮಲಿಂಗಪ್ಪ ಅಂಟರತಾನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಕನ್ನಡ ಧ್ವಜಾರೋಹಣ ಹಾಗೂ ಡಾ. ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ ಗೈದರು.

ಬೆಳಗ್ಗೆ ದೇಶಪಾಂಡೆನಗರ ಪ್ರವಾಸಿ ಮಂದಿರದಿಂದ ಸವಾಯಿ ಗಂಧರ್ವ ಸಭಾಭವನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಜಾಗೃತಿ ನಡಿಗೆ ನಡೆಯಿತು.

ಡೊಳ್ಳು ವಾದ್ಯ, ಜಗ್ಗಲಿಗೆ ತಂಡಗಳು ಭಾಗವಹಿಸಿದ್ದವು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ರೋಟರಿ, ಲ್ಯಾಮಿಂಗ್ಟನ್, ಲಯನ್ಸ್ ಸ್ಕೂಲ್, ಮಹಾವೀರ ಐಟಿಐ ಕಾಲೇಜ್, ಎಸ್​ಜೆಎಂವಿ ಸಂಘದ ಮಹಿಳಾ ಕಾಲೇಜ್ ಹಾಗೂ ಕಿಮ್್ಸ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಪರ ಘೊಷಣೆ ಕೂಗಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net