ಧಾರವಾಡ ಎಪಿಎಂಸಿಯಲ್ಲಿ ಅರಳಿದ ಕಮಲ

Basavaraj Hosur, Krishna Kollanatti
Published on

ಧಾರವಾಡ: ಕಾಂಗ್ರೆಸ್ ಬೆಂಬಲಿತರ ಆಡಳಿತವಿದ್ದ ಧಾರವಾಡ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)ಯಲ್ಲಿ ಬಿಜೆಪಿಯ ಕಮಲ ಅರಳಿದೆ. ಸೋಮವಾರ ಫಲಿತಾಂಶ ಘೊಷಣೆಯಾಗಿದ್ದು, ಅಧ್ಯಕ್ಷರಾಗಿ ಬಸವರಾಜ ಹೊಸೂರ, ಉಪಾಧ್ಯಕ್ಷರಾಗಿ ಕೃಷ್ಣ ಕೊಳ್ಳಾನಟ್ಟಿ ಆಯ್ಕೆಯಾದರು.

ನೂತನ ಅಧ್ಯಕ್ಷ ಬಸವರಾಜ 9 ಮತ ಪಡೆದರೆ, ಪ್ರತಿಸ್ಪರ್ಧಿ ಮಹಾವೀರ ಅಳೆಬಸಪ್ಪನವರ (ಜೈನ) 6 ಮತ ಪಡೆದರು.

ನೂತನ ಉಪಾಧ್ಯಕ್ಷ ಕೃಷ್ಣ ಕೊಳ್ಳಾನಟ್ಟಿ 10 ಮತ ಪಡೆದು ಜಯಿಸಿದರೆ, ಪ್ರತಿಸ್ಪರ್ಧಿ ಬಸವ್ವ ಶಿರಕೋಳ 5 ಮತ ಪಡೆದು ಪರಾಭವಗೊಂಡರು. 16 ಸದಸ್ಯ ಬಲದ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜು. 4ರಂದು ಮತದಾನ ಪ್ರಕ್ರಿಯೆ ಜರುಗಿತ್ತು. ಆದರೆ ಹತ್ತಿ ಸಂಸ್ಕರಣ ಸಂಘದ ಪ್ರತಿನಿಧಿಯಾಗಿ ಎಪಿಎಂಸಿ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ದೀಪಕ ಚಿಂಚೋರೆ ಅವರಿಗೆ, ಸಂಘದ ನವೀಕರಣ ಆಗಿಲ್ಲದ ಕಾರಣಕ್ಕೆ ಮತ ಚಲಾವಣೆ ಮಾಡದಂತೆ ಎಪಿಎಂಸಿ ಕಾರ್ಯದರ್ಶಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅವರಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ನ್ಯಾಯಾಲಯ ಅನುಮತಿ ನೀಡಿತ್ತು. ಜು. 6ರಂದು ಮತ ಎಣಿಕೆ ನಿಗದಿಯಾಗಿತ್ತಾದರೂ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಡಾ. ಸಂತೋಷಕುಮಾರ ಬಿರಾದಾರ ಹೈಕೋರ್ಟ್​ನಿಂದ ಕಾನೂನು ಸಲಹೆ ಪಡೆದು ಫಲಿತಾಂಶ ಪ್ರಕಟಣೆ ಮುಂದೂಡಿದ್ದರು. ಈ ಮಧ್ಯೆ ಹೈಕೋರ್ಟ್ ಮೆಟ್ಟಿಲೇರಿದ್ದ ಚಿಂಚೋರೆ ತಮ್ಮ ಅರ್ಜಿ ವಾಪಸ್ ಪಡೆದಿದ್ದರಿಂದ 15 ಸದಸ್ಯರ ಮತಗಳನ್ನು ಮಾತ್ರ ಪರಿಗಣಿಸಿ ಚುನಾವಣಾಧಿಕಾರಿ ಡಾ. ಬಿರಾದಾರ ಫಲಿತಾಂಶ ಪ್ರಕಟಿಸಿದರು. ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ 7, ಬಿಜೆಪಿ ಬೆಂಬಲಿತ 6 ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಬಿಜೆಪಿಗಿಂತ ಹೆಚ್ಚು ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net