

ಬಾಳೆಹೊನ್ನೂರು: ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು, ಆಚಾರ್ಯರು ಆಶ್ರಮಗಳಲ್ಲಿ ಯಜ್ಞ, ಯಾಗಾದಿಗಳನ್ನು ಮಾಡಿ ಜನರಿಗೆ ಒಳಿತನ್ನು ಬಯಸುತ್ತಿದ್ದರು. ಮಾನವ ಇಂದು ಅತಿಯಾದ ವೈಚಾರಿಕತೆಯಿಂದ ಮನುಷ್ಯ ಧರ್ಮದ ಆಚರಣೆಗಳನ್ನು ಉಲ್ಲಂಘಿಸಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮೂಲ ನಂಬಿಕೆಗಳನ್ನು ಕೆಲವರು ಮೂಢನಂಬಿಕೆಗಳೆಂದು ಪ್ರತಿಬಿಂಬಿಸಿ ಧರ್ವಚರಣೆಯಿಂದ ದೂರ ಸರಿಯುವಂತೆ ಮಾಡುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮೂಲ ಆಚರಣೆಗಳಿಗೆ ಒತ್ತು ಕೊಡುತ್ತಿರುವುದು ಸಮಾಧಾನದ ಸಂಗತಿ. ಕರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಅಗ್ನಿಹೋತ್ರ ಮತ್ತು ಧನ್ವಂತರಿ ಹೋಮ ಮಾಡುತ್ತಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರೂ ಅಗ್ನಿಹೋತ್ರ, ಧನ್ವಂತರಿ ಹೋಮಗಳನ್ನು ನಿತ್ಯ ನೆರವೇರಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಹಲವು ವನಸ್ಪತಿ, ಗಿಡಮೂಲಿಕೆ ಹಾಗೂ ಶುದ್ಧ ಗೋಮಯದಿಂದ ಕ್ರಮವರಿತು ಮಾಡುವ ಹೋಮದಿಂದ ಸೂಕ್ಷ್ಮ ರೋಗಾಣುಗಳು ನಾಶಗೊಳ್ಳುತ್ತವೆ. ಪರಿಸರ ಶುದ್ಧವಾದರೆ ಮನುಷ್ಯನ ಆರೋಗ್ಯ ಉತ್ತಮಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಇದರ ಆಚರಣೆಗೆ ಮಹತ್ವ ನೀಡಬೇಕು ಎಂದು ತಿಳಿಸಿದ್ದಾರೆ.
ಕರೊನಾ ಸೋಂಕಿನ ಭೀತಿಗೆ ಒಳಗಾಗದೇ ಸಂಯಮ, ಮನಃಶಾಂತಿಯಿಂದ ಬಾಳಿದರೆ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪೌರ್ಣಮಿ ಅಂಗವಾಗಿ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಏ.27ರಂದು ಅಗ್ನಿಹೋತ್ರ, ಧನ್ವಂತರಿ ಹೋಮ ನಡೆಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.