

ಚಿಕ್ಕಮಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಜನಸಾಮಾನ್ಯರಿಗೆ ಅಕ್ಷಯ ಪಾತ್ರೆಗಳಿದ್ದಂತೆ. ಫಲಾನುಭವಿಗಳು ಕೇಳುವ ಸೌಲಭ್ಯಗಳನ್ನು ಒದಗಿಸುವ ಮೂಲಕ ನಿರಂತರ ಸ್ಪಂ ದಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ತಿಳಿಸಿದರು.
ನಗರದ ಬ್ರಹ್ಮ ಕುಮಾರೀಸ್ ಈಶ್ವರಿಯ ವಿದ್ಯಾಮಂದಿರದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ಧ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಸಂಘಗಳಲ್ಲಿ ವಾರದ ಸಭೆ ನಿರಂತರವಿರಬೇಕು. ಇದರಿಂದ ಯೋಜನೆಗಳ ಕಾರ್ಯಕ್ರಮ, ಆಗುಹೋಗುಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಸಹಕಾರಿ. ಸುಜ್ಞಾನ, ನಿಧಿ, ಮಾಶಾಸನ, ವಾತ್ಸಲ್ಯ ಕಾರ್ಯಕ್ರಮ, ಆರೋಗ್ಯ-ಸಂಪೂರ್ಣ ಸುರಕ್ಷಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಗೀತಾ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಹಲವು ಸಮಾಜಮುಖಿ ಕಾರ್ಯ ಕ್ರಮ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಮುಂದೆ ಸಾಗಲು ಅನುಕೂಲವಾಗಿದೆ. ಅಲ್ಲದೇ ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಿದರು.
ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ಇನ್ಸಪೆಕ್ಟರ್ ಶೋಭಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಹೆಚ್ಚು ಜಾಗೃತೆ ವಹಿಸುವುದು ಸೂಕ್ತ. ಅದರಲ್ಲೂ ಸೈಬರ್ ಅಪರಾಧಗಳಲ್ಲಿ ಹೆಚ್ಚು ದೂರ ಕಾಪಾಡಿ ಕೊಳ್ಳುವುದು ಸೂಕ್ತ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಸೌಭಾಗ್ಯ. ಈ ಕ್ಷೇತ್ರದಲ್ಲಿ ಸಿಗುವ ಮಾಹಿತಿ ಬೇರೆಲ್ಲೂ ಲಭ್ಯವಾಗುವುದಿಲ್ಲ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಯೋಗಿನಿ ಭಾಗ್ಯಕ್ಕ ಮಾತನಾಡಿ, ಯೋಜನೆಯ ಕಾರ್ಯಕ್ರಮದಿಂದ ನಮ್ಮ ಸಮಾಜದ ಜನರು ತಿಳಿದುಕೊಳ್ಳುವುದು ಬಹಳಷ್ಟಿದೆ. ಸುತ್ತಲಿನ ಜನರನ್ನು ಈ ಕಾರ್ಯ ಕ್ರಮದ ಮೂಲಕ ಪರಿವರ್ತನೆ ಮಾಡಬಹುದು ಎಂದು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯ ಮಂಜುನಾಥ್, ತಾಲೂಕು ಯೋಜನಾಧಿಕಾರಿ ಶ್ರೀರಮೇಶ್‌ನಾಯ್ಕ, ಮೇಲ್ವಿಚಾರಕ ಚಂದನ್ ಮತ್ತಿತರರಿದ್ದರು.