

ಶನಿವಾರಸಂತೆ: ಜನರು ಧರ್ಮಸ್ಥಳದ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಯಾರೇ ಎಷ್ಟೇ ಷಡ್ಯಂತ್ರ ನಡೆಸಿದರೂ ಜನರಲ್ಲಿ ಭಕ್ತಿ ಇದ್ದೆ ಇರುತ್ತದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.
ಅವರು 500ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಶನಿವಾರಸಂತೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣದ ಹಿಂದಿರುವ ವ್ಯಕ್ತಿಯ ಹಿಂದೆ ದುಷ್ಟಶಕ್ತಿ ಇದ್ದು, ಅದು ಯಾರು ಎಂಬುದರ ಬಗ್ಗೆ ತನಿಖೆ ಮುಂದುವರೆಯಬೇಕು. ಎಸ್‌ಐಟಿ ರಚನೆ ಸಂದರ್ಭದಲ್ಲಿ ಇಂತಹ ಆರೋಪ ಬಂದಾಗ ಜನರಿಗೆ ಆರೋಪದ ಬಗ್ಗೆ ಸ್ಪಷ್ಟತೆ ಸಿಗಬಹುದೆಂಬ ಉದ್ದೇಶದಿಂದ ತನಿಖೆಗೆ ಅಡ್ಡ ಬಂದಿರಲಿಲ್ಲ. ಆದರೆ ಈಗ ಜನರಿಗೆ ಎಸ್‌ಐಟಿ ತನಿಖೆಯಿಂದ ಸ್ಪಷ್ಟತೆ ಸಿಕ್ಕಿದ್ದು, ಈ ಷಡ್ಯಂತ್ರದ ಹಿಂದೆ ಇರುವ ಸಂಘಟನೆಗಳನ್ನು ಪತ್ತೆ ಮಾಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ನಾನು ಧರ್ಮಸ್ಥಳಕ್ಕೆ ಒಬ್ಬ ಭಕ್ತನಾಗಿ, ಪ್ರಜೆಯಾಗಿ ಪ್ರಾರ್ಥನೆ ಮಾಡಲು 500ಕ್ಕೂ ಹೆಚ್ಚು ಕಾರ್ಯಕರ್ತರ ಜತೆ ಹೊರಟಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮತ್ತು ಕಣ್ಣು ತೆರೆಸಲಾಗುವುದು ಎಂದರು. ಶನಿವಾರಸಂತೆ ಜೆಡಿಎಸ್ ಪ್ರಮುಖರಾದ ಹರೀಶ್, ಮೋಹನ್, ಧರ್ಮಪ್ಪ, ಮಹಮ್ಮದ್ ಇತರರಿದ್ದರು.