

ಹನೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಣಕಾಸಿನ ವಿಚಾರದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಅಲ್ಲ, ಎಸ್‌ಬಿಐ ಬ್ಯಾಂಕ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಯೋಜನೆಯ ತಾಲೂಕು ಸಂಯೋಜನಾಧಿಕಾರಿ ಪ್ರವೀಣ್‌ಕುಮಾರ್ ತಿಳಿಸಿದರು.
ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಗ್ರಾಮ ಸುಭಿಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ವೀರೇಂದ್ರ ಹಗಡೆ ಅವರು ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವುದರ ಮೂಲಕ ಉಳಿತಾಯ ಮನೋಭಾವನೆಯನ್ನು ಬೆಳೆಸಿ ಆರ್ಥಿಕವಾಗಿ ಸಬಲರಾಗಿಸಬೇಕು ಎನ್ನುವ ಉದ್ದೇಶದಿಂದ 1982ರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿದರು. ರಾಜ್ಯಾದ್ಯಂತ ತಾಲೂಕಿನಲ್ಲಿ ಸಂಸ್ಥೆಯನ್ನು ತೆರೆದಿದ್ದು, ಗ್ರಾಮಕ್ಕೆ ಒಳಿತಾಗಲಿ ಎನ್ನುವ ಉದ್ಧೇಶದಿಂದ ಹಾಗೂ ಜನರನ್ನು ಒಗ್ಗೂಡಿಸುವ ಸಲುವಾಗಿ ಪ್ರತಿ ವರ್ಷ ಗ್ರಾಮ ಸುಭಿಕ್ಷಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಹನೂರು ತಾಲೂಕಿನಲ್ಲಿ 2,387 ಸಂಘಗಳಿದ್ದು, 20 ಸಾವಿರ ಸದಸ್ಯರು ಹಣಕಾಸಿನ ವಿಚಾರದಲ್ಲಿ ಎಸ್‌ಬಿಐ ಬ್ಯಾಂಕ್‌ನೊಂದಿಗೆ ವ್ಯವಹರಿಸುತ್ತಿದ್ದಾರೆ. ಈವರೆಗೂ 12 ಕೋಟಿ ರೂ. ಉಳಿತಾಯವಾಗಿದ್ದು, ದೊರೆತಿರುವ 3 ಕೋಟಿ ರೂ. ಲಾಭವನ್ನು ಸದಸ್ಯರ ಬ್ಯಾಂಕ್ ಖಾತೆಗೆ ಸದ್ಯದಲ್ಲೇ ಸಂದಾಯವಾಗಲಿದೆ. ಹಾಗಾಗಿ ಧರ್ಮಸ್ಥಳ ಯೋಜನೆಯು ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಯೋಜನೆಯು ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಡ ನಿರ್ಮಾಣ, ದೇಗುಲ ಜೀರ್ಣೋದ್ಧಾರ, ಸ್ಮಶಾನ ಅಭಿವೃದ್ಧಿ, ಶಾಲಾ ಕಟ್ಟಡ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವುದರ ಮೂಲಕ ಉತ್ತೇಜಿಸಲಾಗುತ್ತಿದೆ. ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಿದ್ದು, ತಾಲೂಕಿನಲ್ಲಿ ಐವರು ಶಿಕ್ಷಕರನ್ನು ನೇಮಕ ಮಾಡಿದೆ. ತಾಲೂಕಿನಲ್ಲಿ ಯೋಜನೆಯ ಸದಸ್ಯರ 100 ವಿದ್ಯಾರ್ಥಿಗಳಿಗೆ ಸಜ್ಞಾನ ನಿಧಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 29 ಸಿಎಸ್‌ಸಿ ಕೇಂದ್ರಗಳನ್ನು ತೆರೆದು ಕೇಂದ್ರ ಸರ್ಕಾರದ ಯೋಜನೆಗಳನ್ನು ಒದಗಿಸಲಾಗುತ್ತಿದೆ. ಕೃಷಿ, ಮಹಿಳೆಯರ ಸಬಲೀಕರಣ ಹಾಗೂ ಇನ್ನು ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಯೋಜನೆಯ ವತಿಯಿಂದ ಶ್ರೀಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಅಷ್ಟ ಕುಂಕುಮಾರ್ಚನೆ ಹಾಗೂ ಪಂಚಾಮೃತ ಅಭಿಷೇಕ ಸೇವೆ ನೆರವೇರಿಸಲಾಯಿತು.
ಬಂಡಳ್ಳಿ ಮಠದ ಶ್ರೀಫಲಹಾರ ಪ್ರಭುದೇವ ಸ್ವಾಮೀಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್‌ಬಾನು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹದೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರಕಾಶ್ ನಾಯ್ಡು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಇದ್ದರು.