ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಉತ್ತಮ ಬದುಕು

8ss1sadasivaswamy udgatane
Published on

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮದ ತಳಹದಿಯೊಂದಿಗೆ ಜನರಿಗೆ ಉತ್ತಮ ಬದುಕು ರೂಪಿಸುತ್ತಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.


ಕಿರಿಕೊಡ್ಲಿ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕೊಡ್ಲಿಪೇಟೆ ವಲಯ, ಸಾಮೂಹಿಕ ಶ್ರೀ ವರಲಕ್ಷ್ಮೀ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕೌಟುಂಬಿಕ ಸೌಹಾರ್ದತೆ ಹಾಗೂ ಗ್ರಾಮ ಸುಭಿಕ್ಷೆಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.


ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಉತ್ತಮ ಅನುಕೂಲಗಳಾಗುತ್ತಿದ್ದು, ಈ ಸೌಲಭ್ಯಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಜನಸಾಮಾನ್ಯರಿಗೆ ಅನುಕೂಲಕರವಾಗುತ್ತಿರುವುದರ ಜತೆಯಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ಮಾಡದ ಅನೇಕ ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಹಲವಾರು ಯೋಜನೆಗಳು ಜನಮನ್ನಣೆ ಗಳಿಸಿದ್ದು ಶೌಚಗೃಹದಿಂದ ಹಿಡಿದು ದೇವಾಲಯದವರೆಗೂ ಧನಸಹಾಯ ನೀಡುತ್ತಿದ್ದು, ಬಡಬಗ್ಗರಿಗೂ ಸಹಾಯ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಎಚ್.ರೋಹಿತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಲವಾರು ಜನಪ್ರಿಯ ಕಾರ್ಯಕ್ರಮಗಳಿದ್ದು, ಅವುಗಳನ್ನು ಸದಸ್ಯರು ಸದುಪಯೋಗಿಸಿಕೊಳ್ಳಬೇಕು, ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಷ್ಯವೇತನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಜನರಿಗೆ ಸಹಾಯಧನ, ಮಹಿಳೆಯರಿಗೆ ಸ್ವಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದೆ ಎಂದರು.


ಕೊಡ್ಲಿಪೇಟೆ ಶಿಲ್ಪಿ ವರಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮೂಲಕ ಧರ್ಮ, ಸೌಹಾರ್ದತೆ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು.


ಜನಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಭಗವಾನ್ ಮಾತನಾಡಿದರು. ಕೊಡ್ಲಿಪೇಟೆ ಗ್ರಾಪಂ ಅಧ್ಯಕ್ಷೆ ಗೀತಾ ತ್ಯಾಗರಾಜ್, ಬ್ಯಾಡಗೊಟ್ಟ ಗ್ರಾಪಂಅಧ್ಯಕ್ಷ ಮಹಮದ್ ಹನೀಫ್, ಬೆಸೂರು ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಹಂಡ್ಲಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಿರಂಜನ್, ಪೂಜಾ ಸಮಿತಿ ಅಧ್ಯಕ್ಷ ಬಿ.ವಿ.ನಾಗರಾಜು, ಕೊಡ್ಲಿಪೇಟೆ ವಲಯ ಒಕ್ಕೂಟದ ಉಪಾಧ್ಯಕ್ಷೆ ಪಂಕಜ ಪ್ರಕಾಶ್, ಕಾರ್ಯದರ್ಶಿ ನಾಗರಾಜ್ ಪ್ರಮುಖರಾದ ಕಲಾವತಿ, ಮಲ್ಲಿಕಾರ್ಜುನ, ಎ.ಎಸ್.ಮಹೇಶ್, ವಲಯ ಮೇಲ್ವಿಚಾರಕ ನಾಗರಾಜು, ಸೇವಾ ಪ್ರತಿನಿಧಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net