ಧರ್ಮಸ್ಥಳ ಆಧಾರರಹಿತ ಅವಹೇಳನ ನಿಲ್ಲಲಿ

1008 KLB 03
ಧರ್ಮಸ್ಥಳದ ಘನತೆಗೆ ಧಕ್ಕೆ ತರುವಂತೆ ವದಂತಿ ಹರಡಿಸುತ್ತಿರುವ, ಅವಹೇಳನಕಾರಿ ಮಾತಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ಸಕಲ ಜೈನ ಸಮಾಜದಿಂದ ಭಾನುವಾರ ಮೌನ ಪ್ರತಿಭಟನೆ ನಡೆಯಿತು.
Published on

ಕಲಬುರಗಿ: ಮಂಜುನಾಥ ನೆಲೆಸಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಸಕಲ ಜೈನ ಸಮಾಜ ಆಗ್ರಹಿಸಿದೆ.

ಪುರಭವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಭಾನುವಾರ ಮೌನ ಪ್ರತಿಭಟನೆ ನಡೆಸಿದ ಸಮಾಜದವರು, ಪುಣ್ಯಕ್ಷೇತ್ರದ ಬಗ್ಗೆ ಕಪ್ಪು ಚುಕ್ಕೆ ಮೂಡಿಸುತ್ತಿರುವುದು ಸಹಿಸಲಾಗದು. ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ಧರ್ಮಾಧಿಕಾರಿ ಘನತೆಗೆ ಧಕ್ಕೆ ತರುತ್ತಿರುವ ದುಷ್ಟ ಶಕ್ತಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀಕ್ಷೇತ್ರದ ಮೂಲಕ ಇಡೀ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಪುನಶ್ಚೇತನ, ಸೀ ಸಬಲೀಕರಣ ಸೇರಿ ಹಲವು ಸೇವಾ ಕಾರ್ಯ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಧಾರರಹಿತ ಹೇಳಿಕೆ ನೀಡುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಸತ್ಯ ಹೊರಬರಲಿ. ಆದರೆ ಕ್ಷೇತ್ರದ ಘನತೆಗೆ ಕುತ್ತು ತರುತ್ತಿರುವುದು ಸಲ್ಲದು ಎಂದು ಕಿಡಿಕಾರಿದರು.

ಕ್ಷೇತ್ರದ ವಿರುದ್ಧ ಹೋರಾಡುತ್ತಿರುವವರ ಖಾತೆಗೆ ಲಕ್ಷ ಲಕ್ಷ ಹಣ ಎಲ್ಲಿಂದ ಬರುತ್ತಿದೆ ಎಂಬುದರ ತನಿಖೆ ನಡೆಸಬೇಕು. ಜೈನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿಪತ್ರ ಕಳುಹಿಸಿಕೊಟ್ಟರು.

ಮಾಜಿ ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ನಾಗನಾಥ ಚಿಂದೆ, ಪ್ರಕಾಶ ಜೈನ್, ದೀಪಕ ಪಂಡಿತ, ವಜ್ರಕುಮಾರ ಪಾಟೀಲ್, ಧರಣೇಂದ್ರ ಕಣಮುಸ, ರಮೇಶ ಗಡಗಡೆ, ಅರಿಹಂತ ಪಾಟೀಲ್, ರಾಹುಲ್ ಶಹಾ, ವಿನೋದ ಬಬಲಾದ, ಸುಭಾಷ ಕಾವೇರಿ, ಸುರೇಶ ತಂಗಾ, ನಾಗಲಿಂಗಯ್ಯ ಮಠಪತಿ, ಶ್ರೀಕಾಂತ ಕಟಂಬಲೆ, ರಾಹುಲ್ ಕುಂಬಾರೆ, ವಿಜಯಕುಮಾರ ಪಾಂಡ್ರೆ ಇತರರಿದ್ದರು.

ಭಕ್ತಾಭಿಮಾನಿ ವೇದಿಕೆ ಹೋರಾಟ ೧೩ರಂದು

ಕಲಬುರಗಿ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವವರ ವಿರುದ್ಧ ಕಾನೂನು ಕ್ರಮದ ಜತೆಗೆ ಎಸ್‌ಐಟಿಯಿಂದ ಪಾರದರ್ಶಕ ತನಿಖೆಗೆ ಆಗ್ರಹಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಆ.೧೩ರಂದು ಬೆಳಗ್ಗೆ ೧೧ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕ ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ನಗರದ ಜಗತ್ ವೃತ್ತದಿಂದ ಎಸ್‌ವಿಪಿ ವೃತ್ತದ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆ ಬಳಸಿ ತಯಾರಿಸಿದ ವಿಡಿಯೊ ತುಣುಕುಗಳನ್ನು ವ್ಯವಸ್ಥಿತವಾಗಿ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದರಿಂದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾರಿದರು.

ವೇದಿಕೆ ಸಂಚಾಲಕಿ ದಿವ್ಯಾ ಹಾಗರಗಿ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ತನಿಖೆಗೆ ಮುನ್ನವೇ ಗಿರೀಶ ಮಟ್ಟಣ್ಣನವರ್, ಮಹೇಶ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ., ಸಂತೋಷ ಶೆಟ್ಟಿ, ಜಯಂತಿ ಟಿ., ಅಜಯ್ ಅಂಚನ್ ಸೇರಿ ಹಲವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು ದಾಖಲೆ ಪಡೆಯಬೇಕು. ಅವರ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಬರಲಿ ಎಂದು ಗುಡುಗಿದರು.

ನಾಗಲಿಂಗಯ್ಯ ಮಠಪತಿ, ಈರಣ್ಣ ಹಡಪದ ಸಣ್ಣೂರ, ಮಲ್ಲಿಕಾರ್ಜುನ ಕಿಳ್ಳಿ, ಶೋಭಾ ಬಾಗೇವಾಡಿ, ಅನಿಲಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net