ಧರ್ಮದ ಹೆಸರಿನಲ್ಲಿ ಅಶಾಂತಿ:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

11 cmy 4
Published on

ಚಿಂತಾಮಣಿ: ಸರ್ಕಾರಿ ಶಾಲೆ ಮಕ್ಕಳಿಗೆ ಕೇಸರಿ ಟವಲ್ ಹೆಗಲಿಗೆ ಕೊಡುವ ಕೆಲಸ ನಡೆಯುತ್ತಿದೆ. ಆದರೆ ಶ್ರೀಮಂತರ ಮಕ್ಕಳು ಹೋಗುವ ಖಾಸಗಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಹೊರವಲಯ ಮುನುಗನಹಳ್ಳಿ ಬಳಿ ಶಾಸಕ ಎಂ.ಕೃಷ್ಣಾರೆಡ್ಡಿ ನಿರ್ಮಾಣ ಮಾಡಿರುವ ಜೆ.ಕೆ.ಭವನದ ಗೃಹ ಪ್ರವೇಶ, ಘಟಕದ ನೂತನ ಕಚೇರಿ ಮತ್ತು ನೂತನ ಸಭಾಂಗಣದ ಪೂಜಾ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಮಂತ್ರಿಗಳು, ಮಾಜಿ ಮಂತ್ರಿಗಳು ಮತ್ತು ಶಾಸಕರ ಮಕ್ಕಳೆಲ್ಲಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಮುಖಾಂತರ ಧರ್ಮಗಳ ಹೆಸರಿನಲ್ಲಿ ಕೆಲವು ಸಂಘಟನೆಗಳು ಕೋಮು ಭಾವನೆ ಉಂಟು ಮಾಡುತ್ತಿವೆ. ರಾಜ್ಯದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವುದು, ಅದರ ನಿರ್ವಹಣೆ ಬಗ್ಗೆ ಯೋಚಿಸಬೇಕಾದ ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸಿ ಅಶಾಂತಿ ವಾತಾವರಣ ಉಂಟು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ಸಮಸ್ಯೆ ಉದ್ಭವವಾದ ದಿನವೇ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ಇದು ರಾಜ್ಯಾದ್ಯಂತ

ಗಲಾಟೆಯಾಗುತ್ತಿರಲಿಲ್ಲ. ಇತರ ರಾಜ್ಯಗಳಿಗೂ ಇದು ಅಂಟಿಕೊಳ್ಳುತ್ತಿರಲಿಲ್ಲ, ಈ ವಿಷಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೂ ಸಹ ಕಡಿವಾಣ ಹಾಕಬಹುದಿತ್ತು ಎಂದರು.

ಶಾಸಕ ಎಂ.ಕೃಷ್ಣಾರೆಡ್ಡಿ, ಮಾಜಿ ಶಾಸಕ ಶ್ರೀನಿವಾಸಪುರದ ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ ಇತರರಿದ್ದರು.

2023ಕ್ಕೂ ಎಂ.ಕೃಷ್ಣಾರೆಡ್ಡಿ ಆಭ್ಯರ್ಥಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಂ.ಕೃಷ್ಣಾರೆಡ್ಡಿಯವರೇ ಆಭ್ಯರ್ಥಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಈಗಾಗಲೇ ಕ್ಷೇತ್ರದ ಜನತೆ ಕೃಷ್ಣಾರೆಡ್ಡಿ ನಡವಳಿಕೆ ಮೆಚ್ಚಿ, ಪ್ರಾಮಾಣಿಕ ಕೆಲಸ ಮಾಡುತ್ತಿರುವ ಅವರನ್ನು ಕ್ಷೇತ್ರದ ವಾರಸುದಾರ ಎಂದು ಅಶೀರ್ವಾದ ಮಾಡಿದ್ದಾರೆ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net