ಧರ್ಮದ ದಾರಿಯಲ್ಲಿದೆ ಬದುಕಿನ ಸಾರ್ಥಕತೆ

15Kamal1
 ಕಮಲನಗರ ತಾಲೂಕಿನ ಡೋಣಗಾಂವ (ಎಂ) ಸಮೀಪದ ಮಹಾಳಪ್ಪಯ್ಯ ಜಾತ್ರೆಯಲ್ಲಿ ಮಠದ ಪೀಠಾಧಿಪತಿ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಹಾವಗಿಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಉಮಾಕಾಂತ ದೇಶಿ ಕೇಂದ್ರ ಸ್ವಾಮೀಜಿ, ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
Published on

ಕಮಲನಗರ: ಭೌತಿಕ ಸಂಪತ್ತು ಬೆಟ್ಟದಷ್ಟಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕು. ಇದನ್ನು ಪಡೆಯಬೇಕಾದರೆ ಧರ್ಮದ ದಾರಿಯಲ್ಲಿ ನಡೆಯಬೇಕು ಎಂದು ಹಾವಗಿಸ್ವಾಮಿ ಮಠದ ಪೀಠಾಧಿಪತಿ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರು ನುಡಿದರು.

ಡೋಣಗಾಂವ (ಎಂ) ಗ್ರಾಮದ ಸಮೀಪದಲ್ಲಿರುವ ಸುಕ್ಷೇತ್ರ ಮಹಾಳಪ್ಪಯ್ಯ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಒಳ್ಳೆಯ ಸಂಸ್ಕಾರ ಮತ್ತು ಧರ್ಮ ಪಾಲನೆಯಿಂದ ಮಾತ್ರ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಹೇಳಿದರು.

ಮಾನಸಿಕ ನೆಮ್ಮದಿಗೆ ಅಧ್ಯಾತ್ಮದ ಚಟುವಟಿಕೆ ಅವಶ್ಯಕ. ಪ್ರತಿಯೊಂದು ಗ್ರಾಮಗಳಲ್ಲಿ ದೇವಸ್ಥಾನಗಳ ಮೂಲಕ ಪೂಜ್ಯರನ್ನು ಸ್ಮರಿಸುವುದರಿಂದ ಧಾರ್ಮಿಕ ಮನೋಭಾವನೆ ಹೆಚ್ಚಾಗಿ ಸುಂದರ ಸಮಾಜ ರಚನೆಯಾಗಲು ಸಾಧ್ಯ ಎಂದರು.

ಶ್ರೀ ಹಾವಗಿಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನರ ಹಿತವನ್ನು ಬಯಸುವವನೇ ನಿಜವಾದ ಪುರೋಹಿತ.ಹಣದ ಆಮಿಷಕ್ಕೆ ಬಲಿಯಾಗದೇ ಸತ್ಯಪೂರ್ಣ ಧಾರ್ಮಿಕ ಸಂಸ್ಕೃತಿ ಉತ್ಕೃಷ್ಠಗೊಳ್ಳಲು ಶ್ರಮಿಸಬೇಕು ಎಂದು ಹೇಳಿದರು.

ಪಲ್ಲಕ್ಕಿ ಮೆರವಣಿಗೆ: ಜಾತ್ರೋತ್ಸವ ಪ್ರಯುಕ್ತ ಶುಕ್ರವಾರ ಬೆಳಗ್ಗೆ ೯ಕ್ಕೆ ಡಾ. ಶಂಭುಲಿಂಗ ಶಿವಾಚಾರ್ಯ ಹಾಗೂ ಶ್ರೀ ಉಮಾಕಾಂತ ಸ್ವಾಮಿ ದೇಶಿ ಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಾವಗಿಸ್ವಾಮಿ ಮಠದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವದ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸುಕ್ಷೇತ್ರ ಭಕ್ತಮುಡಿ ಮಹಾಳಪ್ಪಯ್ಯ ಸನ್ನಿಧಿವರೆಗೆ ನಡೆಯಿತು. ಗ್ರಾಮದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಜಾತ್ರೋತ್ಸವದಲ್ಲಿ ವಿವಿಧ ತರಹದ ಅಂಗಡಿಗಳು, ವಿವಿಧ ಪ್ರಕಾರದ ಸಿಹಿ ತಿಂಡಿ ತಿನಿಸು ಸವಿದು ಉಲ್ಲಾಸದೊಂದಿಗೆ ಜನ ಹೆಜ್ಜೆ ಹಾಕಿದ್ದು ಕಂಡು ಬಂದಿತ್ತು.

ಡೋಣಗಾಂವ(ಎಂ) ಮಠದ ಶ್ರೀ ಉಮಾಕಾಂತ ದೇಶಿ ಕೇಂದ್ರ ಸ್ವಾಮೀಜಿ, ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಲಿಂಗ ಶಿವಾಚಾರ್ಯರು, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಪ್ರಭುಶಾಂತ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಮತ್ತು ತಾಲೂಕಿನ ಬಹುತೇಕ ಗ್ರಾಮ ಹಾಗೂ ಮಹಾರಾಷ್ಟç, ತೇಲಂಗಾಣ ರಾಜ್ಯದಿಂದ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಭಕ್ತಿ ಎಂಬುದು ಮನುಷ್ಯನಲ್ಲಿ ಇದ್ದರೆ ಸಾಕು. ನಿತ್ಯ ಒಳ್ಳೆಯ ಮನಸ್ಸಿನಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ. ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತವಾಗಿವೆ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ.

| ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಪೀಠಾಧಿಪತಿ ಹಾವಗಿಸ್ವಾಮಿ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net